ಹಾನನ: ಜೀವ ವಿಮಾ ಸಂಸ್ಥೆಯಿಂದ ಪರಿಹಾರದ ಹಣ ಪೀಕಲು ಗಂಡನ ತದ್ರೂಪಿಯಂತೇ ಇದ್ದ ಅಮಾಯಕನೋರ್ವನನ್ನು ಕೊಲೆ ಮಾಡಿ ಅಪಘಾತದಲ್ಲಿ ಮೃತಪಟ್ಟಿರುವಂತೆ ತನಿಖೆಯ ಹಾದಿ ತಪ್ಪಿಸಿದ್ದ ಖತರ್ನಾಕ್ ಆರೋಪಿ ದಂಪತಿಯನ್ನು ಗಂಡಸಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹತ್ಯೆ ನಡೆದು ಹತ್ತು ದಿನಗಳ ನಂತರ ಪ್ರಕರಣ ಬಯಲಿದೆ ಬಂದಿದೆ.
ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶ್ವಾಮಿಗೌಡ ಹಾಗೂ ಶಿಲ್ಪರಾಣಿ ಬಂಧಿತ ದಂಪತಿ. ಮೇಲ್ನೋಟಕ್ಕೆ ಕೊಲೆಯಾಗಿರುವ ವ್ಯಕ್ತಿ ಓರ್ವ ಭಿಕ್ಷುಕ ಎಂಬ ಮಾಹಿತಿ ಲಭ್ಯವಾಗಿದ್ದು, ಆತನ ಗುರುತು ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಆಗಸ್ಟ್ 12 ರಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಗೇಟ್ ಬಳಿಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಪಂಚರ್ ಆಗಿದ್ದ ಕಾರು ಹಾಗೂ ಒಂದು ಲಾರಿ ಸಿಕ್ಕಿದ್ದವು. ಮೇಲ್ನೋಟಕ್ಕೆ ಪಂಚರ್ ಆಗಿದ್ದ ಟೈರ್ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಮೃತಪಟ್ಟಂತೆ ಕಾಣಿಸುತ್ತಿತ್ತು. ಅಪರಿಚಿತ ಮೃತ ದೇಹದನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಗುರುತು ಪತ್ತೆಗೆ ಮುಂದಾಗಿದ್ದಾರೆ.
ಮರುದಿನ (ಆ.13 ರಂದು) ಜಿಲ್ಲಾಸ್ಪತ್ರೆಗೆ ಬಂದಿದ್ದ ಶಿಲ್ಪರಾಣಿ, ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಅಂತ ಗುರುತಿಸಿದ್ದಳು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕೊಂಡೊಯ್ದಿದ್ದ ಆಕೆ ಅಂದೇ ಹೊಸಕೂಟಿ ತಾಲೂಕಿನ, ಚಿಕ್ಕಹೋಲಿಗ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆಸಿದ್ದಳು.
ಗಂಡಸಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ 304 ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪ್ರಕರಣದ ಬಗ್ಗೆ ಅನುಮಾನಗೊಂಡು ತನಿಖೆ ಆರಂಭಿಸಿದ್ದರು. ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಅವರಿಗೆ ಮಾಹಿತಿ ನೀಡಿದ್ದ ಗಂಡಸಿ ಠಾಣಾ ಪೊಲೀಸರು ಹಾಗೂ ಅರಸೀಕೆರೆ ವೃತ್ತ ನಿರೀಕ್ಷರಿಗೆ ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.
ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೈರ್ ಮಾರಾಟ ಮಳಿಗೆ ಹೊಂದಿದ್ದ ಮುನಿಶ್ವಾಮಿಗೌಡ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದರಿಂದಾಗಿ ತನ್ನ ಮರಣಾನಂತರ ದೊರೆಯುವ ಜೀವ ವಿಮಾ ಹಣವನ್ನು ಬದುಕಿದ್ದಾಗಲೇ ಲಪಟಾಯಿಸಲು ಪತ್ನಿ ಜಡೆಗೂಡಿ ತಂತ್ರ ರೂಪಸಿದ್ದರೆಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.