ಹೈದ್ರಾಬಾದ್: ಹೈದರಾಬಾದ್ ನಲ್ಲಿನ ಅಕ್ರಮ ಕಟ್ಟಡಗಳ ಮೇಲೆ ಸಮರ ಆರಂಭಿಸಿರುವ ಹೈಡ್ರಾ (ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಅಂಡ್ ಅಸೆಟ್ಸ್ ಮಾನಿಟರಿಂಗ್ ಅಂಡ್ ಪ್ರೊಟೆಕ್ಷನ್) ಇದೀಗ ಖ್ಯಾತ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನಗೆ ಸೇರಿದ ದುಬಾರಿ ಐಶಾರಾಮಿ N-Convention Centre ಅನ್ನು ತೆರವುಗೊಳಿಸಿದೆ.
ಹೈದರಾಬಾದ್ ನ ಮಾದಾಪುರದಲ್ಲಿ ನಿರ್ಮಾಣವಾಗಿದ್ದ N ಕನ್ವೆನ್ಷನ್ ಸೆಂಟರ್ ಅನ್ನು ಇಂದು ಹೈಡ್ರಾ ಅಧಿಕಾರಿಗಳು ಜೆಸಿಬಿಗಳ ಮೂಲಕ ಧ್ವಂಸ ಮಾಡಿದ್ದಾರೆ. ಪಕ್ಕದ ತಮ್ಮಿಡಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಈ N-Convention Centre ನಿರ್ಮಾಣ ಮಾಡಲಾಗಿತ್ತು ಎಂಬ ಆರೋಪವಿತ್ತು. ಇದೀಗ ನೇರವಾಗಿ ಹೈಡ್ರಾ ಅಧಿಕಾರಿಗಳು ಸುಮಾರು ಮೂರೂವರೆ ಎಕರೆ ಜಾಗದಲ್ಲಿ ನಿರ್ಮಾಣವಾಗಿದ್ದ ಕನ್ವೆನ್ಷನ್ ಸೆಂಟರ್ ಅನ್ನು ತೆರವುಗೊಳಿಸಿದ್ದಾರೆ.
ಹೈಡ್ರಾ ಅಧಿಕಾರಿಗಳು ಇತ್ತೀಚೆಗೆ ನಾಗಾರ್ಜುನ ಅವರ ಎನ್ ಕನ್ವೆನ್ಷನ್ ಸೆಂಟರ್ ವಿರುದ್ಧ ದೂರು ಸ್ವೀಕರಿಸಿದ್ದರು. ಅದರಂತೆ ಭಾರೀ ಭದ್ರತೆಯ ನಡುವೆ ಇಂದು ನಾಗಾರ್ಜುನ ಅವರ ಈ ಕನ್ವೆನ್ಷನ್ ಸೆಂಟರ್ ಅನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ.
ಈ ಒತ್ತುವರಿ ಕಾರ್ಯಾಚರಣೆಯನ್ನು ಚಿತ್ರೀಕರಿಸಲು ಮಾಧ್ಯಮಗಳಿಗೆ ಅನುಮತಿ ನೀಡದ ಕಾರಣ ಮಾಧ್ಯಮದ ಮೇಲೂ ನಿರ್ಬಂಧ ಹೇರಲಾಗಿತ್ತು. ಎನ್ ಕನ್ವೆನ್ಷನ್ ಒಳಗೆ ಹೋಗುವ ಎಲ್ಲಾ ರಸ್ತೆಗಳನ್ನು ಅಧಿಕಾರಿಗಳು ಮುಚ್ಚಿ, ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಿ, ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸೆಂಟರ್ ನೆಲಸಮ ಮಾಡಿದ್ದಾರೆ.
ಇನ್ನು ನಟ ಅಕ್ಕಿನೇನಿ ನಾಗಾರ್ಜುನ ಅವರು ತುಮ್ಮಕುಂಟಾದಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಮೂರು ಎಕರೆಯಲ್ಲಿ ಎನ್ ಕನ್ವೆನ್ಷನ್ ಸೆಂಟರ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೆರೆಯ ಎಫ್‌ಟಿಎಲ್ ವ್ಯಾಪ್ತಿಯಲ್ಲಿ ಈ ಸೆಂಟರ್ ನಿರ್ಮಿಸಿರುವ ಬಗ್ಗೆ ಈ ಹಿಂದೆ ಹಲವು ದೂರುಗಳು ಬಂದಿದ್ದವು.