ವಿಜಯಪುರ : ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತಿದೆ. ಇದಕ್ಕೆ ಸರಿ ಹೊಂದುವ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ ರೆಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆಂದು ಜಿಲ್ಲೆಯ ಸುಮಾರು 15 ಜನ ಯುವಕರಿಗೆ ಒಟ್ಟು 1.50 ಕೋಟಿ ರೂ. ಮಕ್ಮಲ್ ಟೋಪಿ ಹಾಕಿರೋದು ಬೆಳಕಿಗೆ ಬಂದಿದೆ.
ರೆಲ್ವೇ ಇಲಾಖೆಯಲ್ಲಿ ಟಿಸಿ, ಸಿ ದರ್ಜೆ, ಡಿ ದರ್ಜೆ ನೌಕರಿಗಳನ್ನು ಕೊಡಿಸೋದಾಗಿ ಯುವಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಮಹಾದೇವ ರಾಠೋಡ್ ಹಾಗೂ ಹನುಮಂತಗೌಡ ಪಾಟೀಲ್ ಎಂಬುವವರು ಇದೇ ಗ್ರಾಮದ ಯುವಕರು ಸೇರಿ ಹಲವರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಕಳೆದ 2021ರಲ್ಲಿ ಆರೋಪಿಗಳು ರೆಲ್ವೇ ಇಲಾಖೆಯ ಸ್ಟೇಷನ್ ಮಾಸ್ಟರ್, ಸಿ ಹಾಗೂ ಡಿ ದರ್ಜೆ ನೌಕರಿಗೆ ನೇರ ನೇಮಕ ಮಾಡಿಸಿಕೊಡುತ್ತೇವೆಂದು ಯುವಕರನ್ನು ನಂಬಿಸಿದ್ದಾರೆ. ಇವರನ್ನು ನಂಬಿದ ಉದ್ಯೋಗಾಕಾಂಕ್ಷಿಗಳು ಸಾಲಶೂಲ ಮಾಡಿ ಇವರ ಕೈಗೆ ಒಟ್ಟು 1.50 ಕೋಟಿ ಹಣ ಸುರಿದಿದ್ದಾರೆ. ನಂತರ ನಕಲಿ ಇಮೇಲ್ ಖಾತೆಯ ಮೂಲಕ ರೆಲ್ವೇ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಆದೇಶವನ್ನು ಕಳುಹಿಸಿ ಆರೋಪಿಗಳು ಯಾಮಾರಿಸಿದ್ಧಾರೆ.ಕೆಲವರನ್ನು ಮುಂಬೈ ರೆಲ್ವೇ ನಿಲ್ದಾಣದಲ್ಲಿ ತರಬೇತಿಗೆ ಕರೆಯಿಸಿ ನಕಲಿ ಅಧಿಕಾರಿಗಳ ಮೂಲಕ 20 ದಿನಗಳ ಕಾಲ ತರಬೇತಿಯನ್ನೂ ಕೊಡಿಸಿದ್ದಾರೆ. ಆಮೇಲೆ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾ ಹೋಗಿದ್ದಾರೆ. ಈ ವೇಳೆಯೇ ತಾವು ಮೋಸ ಹೋಗಿದ್ದು ಯುವಕರ ಅರಿವಿಗೆ ಬಂದಿದೆ.
ಕಳೆದ 2021ರಲ್ಲಿಯೇ ಉದ್ಯೋಗ ಬಯಸಿದ್ದ ಯುವಕರು ಹಣ ನೀಡಿ ಯಾಮಾರಿದ್ದು, ದುಡ್ಡೂ ಇಲ್ಲ ಇತ್ತ ಕೆಲಸವೂ ಸಿಗದೆ ಕಂಗಾಲಾಗಿದ್ದಾರೆ. ಇದೇ ವಿಚಾರವಾಗಿ ಆರೋಪಿ ಮಹಾದೇವ ರಾಠೋಡ್ಗೆ ಪ್ರಶ್ನೆ ಮಾಡಿದಾಗಲೂ ನಾನು ಮೋಸ ಮಾಡಿಲ್ಲ ಎಂದೇ ವಾದಿಸಿರೋ ಆತ, ಯುವಕರನ್ನು ದೆಹಲಿ, ವಾರಣಾಸಿ, ಹೈದರಾಬಾದ್ ಎಂದು ಓಡಾಡಿಸಿದ್ದಾನೆ. ರೈಲ್ವೇ ಇಲಾಖೆಯ ಡಿ ದರ್ಜೆ ಕೆಲಸಕ್ಕೆ 12 ಲಕ್ಷ ರೂ., ಸಿ ದರ್ಜೆಗೆ 18ರಿಂದ 20 ಲಕ್ಷ ರೂ. ಮತ್ತು ಸ್ಟೇಷನ್ ಮಾಸ್ಟರ್ ಪೋಸ್ಟ್ಗೆ 25 ಲಕ್ಷ ಹಣ ನೀಡಿದ್ದ ಯುವಕರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಹಣ ನೀಡಿ ಐದು ವರ್ಷಗಳಾದರೂ ಕೆಲಸ ಸಿಗದ ಹಿನ್ನಲೆ ಯುವಕರೀಗ ದೂರು ದಾಖಲಿಸಲು ಮುಂದಾಗಿದ್ದಾರೆ.
For More Updates Join our WhatsApp Group :
