ಬೆಂಗಳೂರು – ಬಿಜೆಪಿ ಸೇರಲು ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಮಂಡ್ಯ ಶಾಸಕ ಗಣಿಗ ರವಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ದೂರು ನೀಡಿದೆ.
ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ದೂರು ನೀಡಿದ ಜಿಲ್ಲಾ ಘಟಕ ಪಕ್ಷದ ವಿರುದ್ಧ ಮಾನಹಾನಿ ಹೇಳಿಕೆ ನೀಡಿರುವ ಶಾಸಕ ಗಣಿಗಾ ರವಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದೆ.
ಗಣಿಗಾ ರವಿ ಅವರನ್ನು ಯಾರು? ಎಲ್ಲಿ? ಯಾವಾಗ? ಭೇಟಿ ಮಾಡಿದರು. ಅವರಿಗೆ 100 ಕೋಟಿ ರೂ. ಆಫರ್ ನೀಡಿರುವುದಕ್ಕೆ ದಾಖಲೆಯಿದೆಯೇ?, ಇದ್ದರೆ ಅದನ್ನು ಏಕೆ ಬಿಡುಗಡೆ ಮಾಡಬಾರದು?, ಸುಳ್ಳು ಆರೋಪ ಮಾಡಿರುವ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಈ ಹಿಂದೆಯೂ ಇದೇ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಾ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ಅವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ ಬಂಧಿಸಬೇಕು. ಈ ಹೇಳಿಕೆಯಿಂದ ಬಿಜೆಪಿಗೆ ಸಾಕಷ್ಟು ಮುಜುಗರವಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಕೇವಲ ಪ್ರಚಾರಕ್ಕೋಸ್ಕರ ಸುಳ್ಳು ಆರೋಪಗಳನ್ನು ಮಾಡಿರುವ ಗಣಿಗಾ ರವಿ ಕೂಡಲೇ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.