ನವದೆಹಲಿ: ಕಲಬುರಗಿ ಜಿಲ್ಲೆಯ ನಾಗೂರು ಗ್ರಾಮದ ಇಬ್ಬರು ಹಿರಿಯ ನಾಗರಿಕರು, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡುವ ಅಪೇಕ್ಷೆಯಿಂದ ಕರ್ನಾಟಕದಿಂದ ದೆಹಲಿಗೆ 1800 ಕಿಲೋಮೀಟರ್ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಸೆಪ್ಟೆಂಬರ್ 5ರಂದು ತಮ್ಮ ಪ್ರಯಾಣ ಆರಂಭಿಸಿದ್ದ ಈ ಕಟ್ಟಾ ಅಭಿಮಾನಿಗಳು, ಮೂರು ತಿಂಗಳ ನಂತರ ದೆಹಲಿ ತಲುಪಿದ್ದಾರೆ. ನಿವೃತ್ತ ಪೋಸ್ಟ್‌ಮಾಸ್ಟರ್ ಗುರುಸಿದ್ದಪ್ಪ ಮತ್ತು ತುಳಜಪ್ಪ ಪೂಜಾರಿ ಅವರು ಈ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ, ತಮ್ಮ ಹಳ್ಳಿಯಿಂದ ದೆಹಲಿಗೆ ಪಾದಯಾತ್ರೆ ಮಾಡುವುದಾಗಿ ಗುರುಸಿದ್ದಪ್ಪ ಅವರು ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ಸಂಕಲ್ಪ ಮಾಡಿದ್ದರು. ಈ ಹಿಂದೆ 41 ಬಾರಿ ಶ್ರೀಶೈಲಕ್ಕೆ ಪಾದಯಾತ್ರೆ ಮಾಡಿದ್ದ ಅವರು, ತಮ್ಮ ಸಂಕಲ್ಪ ಈಗ ಈಡೇರಿದೆ. ಹೀಗಾಗಿ ಪಾದಯಾತ್ರೆ ಮೂಲಕ ದೆಹಲಿಗೆ ಬಂದಿದ್ದೇನೆ ಎಂದು ‘ಟಿವಿ9’ಗೆ ದೆಹಲಿಯಲ್ಲಿ ತಿಳಿಸಿದ್ದಾರೆ.
‘‘ನನ್ನ ಪಾಲಿಗೆ ನರೇಂದ್ರ ಮೋದಿ ಅವರು ದೇವರು. ಅವರ ದರ್ಶನ ಮಾಡಿಯೇ ಹೋಗಬೇಕು’’ ಎಂದು ಗುರುಸಿದ್ದಪ್ಪ ಹೇಳಿದ್ದಾರೆ. ಈ ಪಾದಯಾತ್ರೆಗೆ ಶಾಸಕ ಬಸವರಾಜ್ ಮತ್ತಿಮೂಡ್, ಆಟೋ ಚಾಲಕ ಸಂಗಮೇಶ್ ಮತ್ತು ಸಂಸದ ಬಿವೈ ರಾಘವೇಂದ್ರ (ಶಿವಮೊಗ್ಗ) ಸೇರಿದಂತೆ ಹಲವರು ಸಹಕಾರ ನೀಡಿದ್ದಾರೆ ಎಂದು ಗುರುಸಿದ್ದಪ್ಪ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಜನಪರ ಕಾರ್ಯಗಳು ಹಾಗೂ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಬಗ್ಗೆ ಗುರುಸಿದ್ದಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :
