ಚಾಕಲೇಟ್ ನೀಡಿ 2.5 ವರ್ಷದ ಕಂದಮ್ಮನ ಕಿಡ್ನ್ಯಾಪ್.!

ಚಾಕಲೇಟ್ ನೀಡಿ 2.5 ವರ್ಷದ ಕಂದಮ್ಮನ ಕಿಡ್ನ್ಯಾಪ್.!

ಗಂಡು ಮಗು ಬೇಕೆಂಬ ಹಂಬಲದಿಂದ ಅಪಹರಣ.

ತುಮಕೂರು: ಇಂದಿನ 21ನೇ ಶತಮಾನದಲ್ಲಿ ಹೆಣ್ಣು-ಗಂಡು ಸಮಾನರು ಎಂಬ ಆಲೋಚನೆ ತಕ್ಕಮಟ್ಟಿಗೆ ನಮ್ಮ ಸಮಾಜದಲ್ಲಿದೆ. ಆದರೂ ಇಲ್ಲೊಬ್ಬ ಮಹಿಳೆ ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದರೂ ಗಂಡು ಮಗು ಬೇಕೆಂಬ ದುರಾಸೆಗೆ ಬಿದ್ದು, ಎರಡೂವರೆ ವರ್ಷದ ಮಗುವನ್ನೇ ಅಪರಹಿಸಿದ್ದಾಳೆ. ತುಮಕೂರಿನ ಜಾತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಅಪರಹಿಸಲಾಗ ಮಗುವನ್ನು ಬೆಂಗಳೂರಿನ ಕೊರಮಂಗಲ ಪ್ರದೇಶದಲ್ಲಿ ಪತ್ತೆ ಮಾಡಲಾಗಿದ್ದು, ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಜಾತ್ರೆಯಲ್ಲಿ ಕಾಣೆಯಾದ ಮಗು ಬೆಂಗಳೂರಿನಲ್ಲಿ ಪತ್ತೆ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ ಜಾತ್ರೆ ವೇಳೆ ಅಪಹರಣಗೊಂಡಿದ್ದ ಎರಡುವರೆ ವರ್ಷದ ಗಂಡು ಮಗುವನ್ನು ಶಿರಾ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿ ವಾಸಿಸುವ ದಂಪತಿಯ ಮಗುವನ್ನು ಫೆಬ್ರವರಿ 1ರಂದು ಶಿರಾ ಜಾತ್ರಾ ಮಹೋತ್ಸವದ ವೇಳೆ ಅಪಹರಿಸಲಾಗಿತ್ತು. ಮಗುವನ್ನು ಅದರ ತಾತ ಪುಟ್ಟರಂಗಯ್ಯ ತಮ್ಮೊಂದಿಗೆ ಜಾತ್ರೆಗೆ ಕರೆತಂದಿದ್ದರು.

ಜಾತ್ರೆಯಲ್ಲಿ ಅಂಗಡಿ ಹಾಕಿದ್ದ ತಾತನೊಂದಿಗೆ ಇದ್ದ ಮಗುವನ್ನು ನೋಡಿದ ಆರೋಪಿಗಳು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗುವನ್ನು ಕರೆದೊಯ್ದಿದ್ದರು. ಈ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿರಾ ಡಿವೈಎಸ್‌ಪಿ ಶೇಖರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಲಾಗಿತ್ತು.

ಗಂಡು ಮಗು ಬೇಕೆಂಬಾಸೆಗೆ ಮಗು ಕಿಡ್ನ್ಯಾಪ್

ಕೊನೆಗೆ ಬೆಂಗಳೂರಿನ ಕೊರಮಂಗಲದಲ್ಲಿರುವ ಶಾಂತಮೇರಿ ಎಂಬ ಮಹಿಳೆಯ ಮನೆಯಲ್ಲಿ ಮಗು ಪತ್ತೆಯಾಗಿದೆ. ಆರೋಪಿ ಶಾಂತಮೇರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರೂ ಗಂಡು ಮಗು ಬೇಕೆಂಬ ಹಂಬಲದಿಂದ ಸಂಬಂಧಿ ನರಸಯ್ಯನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾತ್ರೆಗೂ ಎರಡು ದಿನ ಮೊದಲು ತುಮಕೂರಿಗೆ ಬಂದಿದ್ದ ಶಾಂತಮೇರಿ ಮತ್ತು ನರಸಯ್ಯ, ಪೂರ್ವ ಯೋಜನೆಯೊಂದಿಗೆ ಮಗುವಿನ ಅಪಹರಣ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಜಾತ್ರೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಚಲನವಲನ ಗಮನಿಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *