200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಜಾರಿಯಲ್ಲಿದೆ. ಪ್ರಕರಣವನ್ನು ರದ್ದು ಗೊಳಿಸುವ ಕುರಿತಾಗಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿ ಹೈಕೋರ್ಟ್ಗೆ ಅರ್ಜಿಗಳನ್ನು ಹಾಕಿಕೊಂಡಿದ್ದರು. ಆದರೆ ಜಾಕ್ವೆಲಿನ್ ಅರ್ಜಿ ತಳ್ಳಿ ಹಾಕಲ್ಪಟ್ಟಿದ್ದು, ನಟಿಗೆ ತೀವ್ರ ಸಂಕಷ್ಟ ಎದುರಾಗಿದೆ.

‘ವಿಕ್ರಾಂತ್ ರೋಣ’ ಸಿನಿಮಾನಲ್ಲಿ ‘ರಕ್ಕಮ್ಮ’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕಳೆದ ಕೆಲ ವರ್ಷಗಳಿಂದಲೂ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಮಹಾನ್ ವಂಚಕ ಸುಖೇಶ್ ಕುಮಾರ್ ಗೆಳೆತನದಿಂದಾಗಿ ಸಾಕಷ್ಟು ಸಮಸ್ಯೆಗೆ ಜಾಕ್ವೆಲಿನ್ ಸಿಲುಕಿಕೊಂಡಿದ್ದು, ಸತತವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ ನಟಿ. ಇತ್ತೀಚೆಗೆ ಜಾಕ್ವೆಲಿನ್, ತಮ್ಮ ಮೇಲಿನ ಕ್ರಿಮಿನಲ್ ಮೊಕದ್ದಮೆ ಕೈಬಿಡಬೇಕು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿಯೂ ಸಹ ನಟಿಗೆ ಹಿನ್ನಡೆ ಉಂಟಾಗಿದೆ.
200 ಕೋಟಿ ಹಣ ಅಕ್ರ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸಹ ಆರೋಪಿ ಆಗಿದ್ದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು ವಿಚಾರಣೆ ಚಾಲ್ತಿಯಲ್ಲಿದೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ನಟಿ ಜಾಕ್ವೆಲಿನ್ ಫರ್ನಾಂಡೀಸ್, ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಟಿಯ ಅರ್ಜಿಯನ್ನು ತಿರಸ್ಕರಿಸಿದೆ. ಆ ಮೂಲಕ ನಟಿಗೆ ದೊಡ್ಡ ಹಿನ್ನಡೆಯೇ ಆದಂತಾಗಿದೆ. ನಟಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮುಂದುವರೆಯಲಿದ್ದು, ನಟಿಗೆ ವ್ಯತಿರಿಕ್ತ ತೀರ್ಪು ಬಂದಾದಲ್ಲಿ ನಟಿ ಜೈಲಿಗೆ ಸಹ ಹೋಗಬೇಕಾಗುತ್ತದೆ.
ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಪರ ವಕೀಲರು, ಸುಖೇಶ್ ನೀಡಿದ್ದ ಉಡುಗೊರೆಗಳಿಗೆ ಹಣದ ಮೂಲ ಯಾವುದು ಎಂಬುದು ಜಾಕ್ವೆಲಿನ್ ಫರ್ನಾಂಡೀಸ್ಗೆ ಗೊತ್ತಿರಲಿಲ್ಲ. ಸುಖೇಶ್, ತನ್ನ ಅಪರಾಧದ ಭಾಗವಾಗಿ ಜಾಕ್ವೆಲಿನ್ಗೆ ಆ ಉಡುಗೊರೆಗಳನ್ನು ನೀಡಿದ್ದ. ಆದರೆ ಜಾಕ್ವೆಲಿನ್ಗೆ ಆ ವಿಷಯ ಗೊತ್ತಿರಲಿಲ್ಲ. ಜಾಕ್ವೆಲಿನ್ ಆರೋಪಿ ಅಲ್ಲ ಸಂತ್ರಸ್ತೆ ಎಂದು ವಾದ ಮಂಡಿಸಿದ್ದರು. ಆದರೆ ಇಡಿ ಪರ ವಕೀಲರು ಇದನ್ನು ತಳ್ಳಿ ಹಾಕಿದ್ದು, ಸುಖೇಶ್ ಎಂಥಹಾ ವ್ಯಕ್ತಿ ಎಂಬುದು ಜಾಕ್ವೆಲಿನ್ಗೆ ಗೊತ್ತಿತ್ತು ಎಂದು ವಾದಿಸಿದರು.
ರ್ಯಾನ್ಬಾಕ್ಸಿ ಸಂಸ್ಥೆಯ ಮಾಲೀಕರನ್ನು ಜೈಲಿನಿಂದ ಬಿಡುಗಡೆ ಮಾಡಿಸುವುದಾಗಿ ಹೇಳಿ ಅವರ ಕುಟುಂಬದಿಂದ ಬರೋಬ್ಬರಿ 200 ಕೋಟಿ ರೂಪಾಯಿ ಹಣವನ್ನು ಸುಖೇಶ್ ಚಂದ್ರಶೇಖರ್ ಪಡೆದುಕೊಂಡಿದ್ದ. ಅದೇ ಹಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ದುಬಾರಿ ಕಾರುಗಳು, ಮನೆ, ಜಾಕ್ವೆಲಿನ್ ಸಹೋದರನ ಖಾತೆಗೆ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದ. ಜಾಕ್ವೆಲಿನ್ಗೆ ಮಾತ್ರವೇ ಅಲ್ಲದೆ ನೋರಾ ಫತೇಹಿ ಹಾಗೂ ಇತರೆ ಕೆಲವು ನಟಿಯರಿಗೂ ಸಹ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದ.
ಇದೀಗ ಸುಖೇಶ್ ಜೈಲಿನಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಅಸಲಿಗೆ ಸುಖೇಶ್ ಹಲವು ವರ್ಷಗಳಿಂದಲೂ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿದ್ದುಕೊಂಡೆ ಹಲವರಿಗೆ ನೂರಾರು ಕೋಟಿ ರೂಪಾಯಿ ಹಣ ವಂಚನೆ ಮಾಡಿದ್ದಾನೆ. ಜೈಲಿನಲ್ಲಿದ್ದ ಸಂದರ್ಭದಲ್ಲಿಯೇ ಸುಖೇಶ್, ಜಾಕ್ವೆಲಿನ್ ಅನ್ನು ಭೇಟಿಯಾಗಿದ್ದ. ಇಬ್ಬರ ನಡುವೆ ಪ್ರೀತಿಯೂ ಇತ್ತು. ಈ ಇಬ್ಬರೂ ಆಪ್ತವಾಗಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.