ನವದೆಹಲಿ: ವಿಶ್ವದ ಯಾವುದೇ ನಾಯಕರು ಪಾಕಿಸ್ತಾನದ ಜೊತೆಗಿನ ನಮ್ಮ ಸಂಘರ್ಷವನ್ನು ತಡೆದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದರು. ಇದಾದ ಮರುದಿನವಾದ ಇಂದು (ಬುಧವಾರ) ಟ್ರಂಪ್ ಭಾರತದ ಮೇಲೆ ಶೇಕಡಾ 25 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.
ಭಾರತವು ಮಿತ್ರ ರಾಷ್ಟ್ರವಾಗಿದ್ದರೂ, ಅದು ನಮ್ಮ ವಸ್ತುಗಳ ಮೇಲೆ ವಿಧಿಸುತ್ತಿರುವ ತೆರಿಗೆ ಅತ್ಯಧಿಕವಾಗಿದೆ. ಹೀಗಾಗಿ, ಆ ದೇಶದ ವಸ್ತುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವುದಾಗಿ ಅವರದ್ದೇ ಒಡೆತನದ ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತವು ರಷ್ಯಾದಿಂದ ಅಧಿಕ ತೈಲ ಖರೀದಿಸುತ್ತಿರುವನ್ನು ನಿಲ್ಲಿಸಬೇಕು ಎಂದು ಟ್ರಂಪ್ ಸೂಚಿಸಿದ್ದರು. ಆದರೆ, ಇದಕ್ಕೆ ಭಾರತ ಸೊಪ್ಪು ಹಾಕಿರಲಿಲ್ಲ. ಅಮೆರಿಕ ಮತ್ತು ಭಾರತದ ಮಧ್ಯೆ ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯುತ್ತಿರುವ ನಡುವೆಯೇ ಹಠಾತ್ ಆಗಿ ಸುಂಕದ ಪ್ರಮಾಣವನ್ನು ಘೋಷಿಸಲಾಗಿದೆ.
ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಆಗಸ್ಟ್ 1 ರಿಂದ ಶೇ.25 ರಷ್ಟು ಸುಂಕ ವಿಧಿಸಲಾಗುವುದು. ಭಾರತ ನಮ್ಮ ಮಿತ್ರ ರಾಷ್ಟ್ರವಾಗಿದ್ದರೂ, ಅವರೊಂದಿಗೆ ನಮ್ಮ ವ್ಯವಹಾರ ಅಷ್ಟಕ್ಕಷ್ಟೆ. ಅಮೆರಿಕದ ಸರಕುಗಳ ಮೇಲೆ ಭಾರತ ಅಧಿಕ ಸುಂಕ ವಿಧಿಸುತ್ತಿದೆ. ಎಲ್ಲ ದೇಶಗಳಿಗೆ ಹೋಲಿಸಿದರೆ ಅವರದ್ದು ಅಧಿಕ ತೆರಿಗೆಯಾಗಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.