ಬೆಳಗಾವಿ: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕೃಷ್ಣ ಮೃಗಗಳು ಸಾವನ್ನಪ್ಪುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಒಟ್ಟು 28 ಕೃಷ್ಣ ಮೃಗಗಳು ಮೃತಪಟ್ಟಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮತ್ತು ಗೊಂದಲ ಹೆಚ್ಚಾಗಿದೆ.
ಇಂದು ಒಂದೇ ದಿನ 20 ಕೃಷ್ಣ ಮೃಗಗಳ ಸಾವು
ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಸಾವು ಸಂಭವಿಸಿತ್ತು. ಆದರೆ, ಇಂದು ಒಂದೇ ದಿನ 20 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಏಕಾಏಕಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಬ್ಯಾಕ್ಟೀರಿಯಾ ಇನ್ಫೆಕ್ಷನ್ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಎರಡು ದಿನಗಳ ಹಿಂದೆ ಮೃತಪಟ್ಟ ಮೃಗಗಳ ಮೃತದೇಹಗಳನ್ನು ವಿಶ್ಲೇಷಣೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಲ್ಯಾಬ್ ವರದಿ ಬರುವ ಮುನ್ನವೇ ಮತ್ತಷ್ಟು ಸಾವು
ಲ್ಯಾಬ್ ವರದಿ ಇನ್ನಷ್ಟೇ ಬರಬೇಕಿದ್ದು, ಇಂದು ಮತ್ತೆ 20 ಮೃಗಗಳು ಸಾವನ್ನಪ್ಪಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮರಣೋತ್ತರ ಪರೀಕ್ಷೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಏತನ್ಮಧ್ಯೆ, ಘಟನೆ ಬಳಿಕ ಎಸಿಎಫ್ ನಾಗರಾಜ್ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೃಗಾಲಯದಲ್ಲಿ ಮೃಗಗಳ ಆರೈಕೆ, ಆಹಾರ, ನೀರಿನ ಗುಣಮಟ್ಟ ಹಾಗೂ ಸೋಂಕಿನ ಹರಡುವಿಕೆ ಕುರಿತಂತೆ ಪರಿಶೀಲನೆ ಮುಂದುವರಿದಿದೆ.
For More Updates Join our WhatsApp Group :
