ವಿಜಯಪುರ: ಆಟವಾಡುವ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ನಡೆದಿದೆ. ಶಿವಮ್ಮ ರಾಜು ರಾಠೋಡ್ (8), ಕಾರ್ತಿಕ ವಿಶ್ವ ರಾಠೋಡ್ (7) ಹಾಗೂ ಸ್ವಪ್ನಾ ರಾಜು ರಾಠೋಡ್ (12) ಮೃತ ಮಕ್ಕಳಾಗಿದ್ದು,ಕರುಳ ಕುಡಿಗಳನ್ನು ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಹದೇವ ನಗರದ ಬಳಿಯ ರಾಠೋಡ್ ಎಂಬವರ ಜಮೀನಿನಲ್ಲಿ ಮೂವರು ಮಕ್ಕಳು ಕುರಿಗಳ ಜೊತೆಗೆ ಆಟವಾಡುತ್ತಿದ್ದರು.ಕುಟುಂಬದವರು ಸಹ ಮಕ್ಕಳು ಇಲ್ಲಿಯೇ ಆಟವಾಡುತ್ತಿದ್ದಾರಲ್ಲ ಎಂದು ಅಂದುಕೊಂಡಿದ್ದರು. ಹೀಗೆ ಕುರಿಗಳ ಜೊತೆ ಆಡುತ್ತ ಕೃಷಿ ಹೊಂಡದ ಬಳಿ ತೆರಳಿರುವ ಮಕ್ಕಳು ಆಯತಪ್ಪಿ ಬಿದ್ದಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಹಳ ಹೊತ್ತಾದರೂ ಮಕ್ಕಳು ಬಾರದಿರುವ ಹಿನ್ನಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಸಂಶಯ ಬಂದು ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಮೂವರು ಮಕ್ಕಳ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಚೆನಗೊಂಡ ಹಾಗೂ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಕಾನೂನಿನ ಪ್ರಕಾರ ಕೃಷಿಹೊಂಡದ ಸುತ್ತಲೂ ತಂತಿ ಬೇಲಿಯನ್ನ ಕಡ್ಡಾಯವಾಗಿ ಹಾಕಬೇಕು. ಕೃಷಿ ಹೊಂಡದ ಬಳಿ ಯಾರೂ ಓಡಾಡದಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಇದ್ಯಾವುದೇ ನಿಯಮಗಳನ್ನು ಕೆಲ ರೈತರು ಪಾಲನೆ ಮಾಡದಿರುವುದೇ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ. ಹೀಗಾಗಿ ಇನ್ನಾದರೂ ಕೃಷಿ ಹೊಂಡಗಳನ್ನು ಹೊಂದಿರುವ ರೈತರು ಎಚ್ಚೆತ್ತುಕೊಳ್ಳಬೇಕಿದ್ದು, ಕೃಷಿ ಹೊಂಡದ ಸುತ್ತ ಬೇಲಿ ಅಥವಾ ತಡೆಗೋಡೆಯನ್ನ ಖಡ್ಡಾಯವಾಗಿ ನಿರ್ಮಿಸಬೇಕು ಎಂಬ ಮಾತುಗಳು ಕೇಳಿಬಂದಿವೆ.
For More Updates Join our WhatsApp Group :