ತುಮಕೂರಿನ ಉಂಡೇ ಕೊಬ್ಬರಿ ರೈತರ ಖಾತೆಗೆ 346.50 ಕೋಟಿ ರೂ. ಪಾವತಿ: ಕೇಂದ್ರ ಸಚಿವ ಸೋಮಣ್ಣ

ಬೆಂಗಳೂರು: 2024 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸ್ಪಲಟ್ಟ ಉಂಡೇ ಕೊಬ್ಬರಿಗೆ ಸಂಬಂಧಪಟ್ಟ 346.50 ಕೋಟಿ ರೂ. ಮೊತ್ತವನ್ನು ರೈತರ ಖಾತೆಗೆ ಪಾವತಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

2024 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸುಮಾರು 27,000 ರೈತರಿಂದ ಒಟ್ಟು 3,15,000 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಟ ಬೆಂಬಲ ಬೆಲೆ ಅಡಿ ಖರೀದಿಸಲಾಗಿತ್ತು. ಈ ಸಂಬಂಧ ಒಟ್ಟು ಬಾಬ್ತು 378 ಕೋಟಿ ರೂ.ಗಳನ್ನು ತುಮಕೂರಿನ ಕೊಬ್ಬರಿ ಬೆಳೆಗಾರರಿಗೆ ಪಾವತಿಸಬೇಕಾಗಿತ್ತು. ಹಾಗಾಗಿ, ಆಗಸ್ಟ್ 5 ರವರೆಗೆ ಸುಮಾರು 346.50 ಕೋಟಿ ರೂ. ಮೊತ್ತವನ್ನು (ಪ್ರತಿಶತ 92 ರಷ್ಟು) ರೈತರ ಖಾತೆಗೆ ನೇರವಾಗಿ(ಡಿಬಿಟಿ ಮುಖೇನ) ಪಾವತಿಸಲಾಗಿದೆ ಎಂದು ಕೇಂದ್ರ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು 24,600 ರೈತರಿಗೆ ಈ ಬಾಬ್ತು ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ಪಾವತಿಸಲಾಗಿದೆ. ಬಾಕಿ ಉಳಿದ ಸುಮಾರು 2,438 ರೈತರ ಖಾತೆಗೆ ಅಂದಾಜು 31.64 ಕೋಟಿ ಬಾಬ್ತನ್ನು ರೈತರಿಗೆ ಪಾವತಿಸಬೇಕಾಗಿದೆ (ಪ್ರತಿಶತ 8 ರಷ್ಟು ಮಾತ್ರ). ಈ ಮೊತ್ತವನ್ನು ಅತೀ ಶೀಘ್ರದಲ್ಲಿ ತುಮಕೂರಿನ ರೈತರಿಗೆ ಪಾವತಿಸುವಂತೆ ರಾಜ್ಯದಲ್ಲಿನ ಸಂಬಂಧಪಟ್ಟ ಎಜೆನ್ಸಿಗೆ ನಿರ್ದೆಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿನ ನೆಫೆಡ್ ಸಂಸ್ಥೆಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಮೊತ್ತ 691 ಕೋಟಿ ರೂ. ಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಸಚಿವ ಸೋಮಣ್ಣ ತಿಳಿಸಿದ್ದಾರೆ.

ರೈತರ ಖಾತೆಗೆ ಹಣ ಸಂದಾಯವಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೇಂದ್ರ ಸಚಿವ ಸೋಮಣ್ಣ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *