ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ಪೊಲೀಸ್ ಸಿಬ್ಬಂದಿಯಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನ ಶಿವಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗದಲ್ಲಿ ನೀಡಿದ್ದ ದೂರು ಹಿಂಪಡೆಯುವುದಾಗಿ 25 ಸಾವಿರ ರೂ. ವಸೂಲಿ ಮಾಡಿದ್ದ ಆರೋಪದ ಮೇಲೆ ಸೈಯ್ಯದ್ ಸರ್ಫರಾಜ್ ಅಹಮದ್ (35)ನನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 24ರಂದು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಮೊಹಮ್ಮದ್ ಇರ್ಷಾದ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಮೊಹಮ್ಮದ್ ಇರ್ಷಾದ್‌ನೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಸಹ, ಆತನನ್ನ ಕಾನೂನುಬಾಹಿರವಾಗಿ ಪೊಲೀಸ್ ಕಸ್ಟಡಿಯಲ್ಲಿರಿಸಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗದಲ್ಲಿ ಸರ್ಫರಾಜ್ ದೂರು ನೀಡಿದ್ದರು. ಬಳಿಕ ಪ್ರಕರಣ ಹಿಂಪಡೆದುಕೊಳ್ಳಲು 50 ಸಾವಿರ ರೂ ನೀಡುವಂತೆ ಪೊಲೀಸರ ಬಳಿಯೇ ಬೇಡಿಕೆಯಿಟ್ಟಿದ್ದ. ಅಲ್ಲದೇ ಜುಲೈ 29ರಂದು ಕ್ವೀನ್ಸ್ ರಸ್ತೆಯ ಬಳಿ ಪೊಲೀಸರಿಂದಲೇ 25 ಸಾವಿರ ರೂ ಪಡೆದುಕೊಂಡಿದ್ದನಂತೆ. ಬಳಿಕ ಆತನನ್ನು ವಶಕ್ಕೆ ಪೊಲಿಸರು ಪಡೆಯುವಷ್ಟರಲ್ಲಿ ಕಾಲ್ಕಿತ್ತಿದ್ದ ಎನ್ನಲಾಗಿದೆ‌.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಠಾಣಾ ಪೊಲೀಸರು ಸದ್ಯ ಆತನನ್ನ ಬಂಧಿಸಿದ್ದಾರೆ. ಪೊಲೀಸ್ ಠಾಣೆಗಳಿಗೆ ಹೋಗುತ್ತಿದ್ದ ಆರೋಪಿ, ಸಿಬ್ಬಂದಿ ಮತ್ತು ಅಧಿಕಾರಿಗಳನ್ನ ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಠಾಣೆಯ ಸೆಲ್ ಒಳಗೆ ಇರುವ ಆರೋಪಿಗಳನ್ನ ಪರಿಚಯಿಸಿಕೊಂಡು ಅವರ ಪೂರ್ವಾಪರ, ಅವರ ವಿರುದ್ಧದ ಪ್ರಕರಣದ ಮಾಹಿತಿ ಪಡೆದುಕೊಳ್ಳುತ್ತಿದ್ದ. ನಂತರ ಪೊಲೀಸರು ಕಾನೂನು‌ಬಾಹಿರವಾಗಿ ಕಸ್ಟಡಿಯಲ್ಲಿರಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತಿದ್ದ. ಬಳಿಕ ಪ್ರಕರಣ ಹಿಂಪಡೆಯುವುದಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಆರೋಪಿ ಇದೇ ರೀತಿ ಪೂರ್ವ ವಿಭಾಗದ ಹಲವು ಪೊಲೀಸರಿಂದ ಹಣ ಸುಲಿಗೆ ಮಾಡಿರುವ ಶಂಕೆಯಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *