ಕಾರ್ಮಿಕರ ಹಿತದಲ್ಲಿ ಹೊಸ ಆಯಾಮ.
ಕಳೆದ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ಕಾಯಿದೆಗಳಲ್ಲಿ ಒಂದು ಜಿ ರಾಮ್ ಜಿ. ಇದರ ಪೂರ್ತಿ ಹೆಸರು ವಿಬಿ-ಜಿ-ರಾಮ್-ಜಿ ಅಂದರೆ ವಿಕಸಿತ ಭಾರತ- ರೋಜಗಾರ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) Viksit Bharat – Guaratee Rozgar Azeevika Mission (Gramin) (VB-G-RAM-G) ಎಂಬುದಾಗಿದೆ. ಈ ಕಾಯ್ದೆಯು ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸುವ ಗುರಿ ಹೊಂದಿದೆ. ಇದು ರೈತರು ಹಾಗೂ ಕಾರ್ಮಿಕರ ಘನತೆಗೆ, ಪಾರದರ್ಶಕತೆ ಹಾಗೂ ನಿಜವಾದ ಗ್ರಾಮೀಣ ಸಬಲೀಕರಣಕ್ಕೆ ಒತ್ತು ನೀಡುತ್ತದೆ.
60 ದಿನಗಳ ವಿರಾಮ
ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ 60 ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ರೈತರು ತಮ್ಮ ವೈಯಕ್ತಿಕ ಕೃಷಿ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯವಾಗಲಿದೆ. ಈ 60 ದಿನದ ವಿರಾಮ ಅವಧಿ ಯಾವಾಗ ಇಡಬೇಕೆಂಬುದನ್ನು ಆಯಾ ಪ್ರದೇಶದ ಆಡಳಿತದ ರಾಜ್ಯ ಸರ್ಕಾರ ನಿರ್ಧರಿಸಬಹುದು. ಆಯಾ ಪ್ರದೇಶದ ಬಿತ್ತನೆ ಅಥವಾ ಕೊಯ್ಲು ಅವಧಿಗೆ ನೋಡಿ ಇದನ್ನು ನಿರ್ಧರಿಸಬಹುದು.
ಹಿಂದೆ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗ, ವರ್ಷಕ್ಕೆ ಕನಿಷ್ಠ ಮೂರು ತಿಂಗಳಾದರೂ ವಿರಾಮ ಅವಧಿ ಕೊಡಬೇಕು ಎಂದು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಹೀಗಾಗಿ, ಹೊಸ ಕಾಯ್ದೆಯಲ್ಲಿ 60 ದಿನಗಳ ವಿರಾಮ ಅವಧಿ ನಿಗದಿ ಮಾಡಿರುವುದು ಅಚ್ಚರಿ ಅನಿಸುವುದಿಲ್ಲ.
ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಬಾಧ್ಯತೆ
ಹಿಂದೆ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ, ಮನ್ರೇಗಾ ಯೋಜನೆಯ ವೆಚ್ಚದಲ್ಲಿ ರಾಜ್ಯಗಳೂ ನಿರ್ದಿಷ್ಟ ಪ್ರಮಾಣದ ವೆಚ್ಚವನ್ನು ಭರಿಸಬೇಕೆಂದು ಬಯಸಿದ್ದರು. ಆಗ ಸಾಮಗ್ರಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.75 ಮತ್ತು ರಾಜ್ಯಗಳು ಶೇ. 25 ಹೊತ್ತುಕೊಂಡಿದ್ದವು. ಯೋಜನೆಗಳನ್ನು ಜವಾಬ್ದಾರಿಯಾಗಿ ನಿರ್ವಹಿಸುವುದು ರಾಜ್ಯಗಳ ಕೆಲಸ. ರಾಜ್ಯಗಳ ಹಣದ ಪಾಲುದಾರಿಕೆ ಹೆಚ್ಚಾದಂತೆ, ಯೋಜನೆಗಳ ಮಾಲೀಕತ್ವ ಕೂಡ ಬಲವಾಗುತ್ತದೆ. ಆಸ್ತಿ ಯೋಜನೆ, ನಿರ್ವಹಣೆ ಹಾಗು ಅನುಷ್ಠಾನದಲ್ಲಿ ಹೆಚ್ಚಿನ ಜವಾಬ್ದಾರಿ ಬರುತ್ತದೆ.
ಬೇಡಿಕೆ ಬದಲು ಪೂರೈಕೆ ಆಧಾರಿತ ಕೆಲಸ ಹಂಚಿಕೆ
ಬೇಡಿಕೆ ಆಧಾರದ ಮೇಲೆ ಕೆಲಸ ಹಂಚಿಕೆ ಮುಕ್ತವಾಗಿತ್ತು, ಆದರೆ, ಅದು ಸರ್ಕಾರದ ಬಜೆಟ್‌ನ ಮಿತಿಯಲ್ಲೇ ಇರಬೇಕಿತ್ತು. ಈಗ ಪೂರೈಕೆ ಆಧಾರಿತ ವ್ಯವಸ್ಥೆ ಹೆಚ್ಚು ಯೋಜಿತವಾಗಿದೆ. ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ಗಳ ಮೂಲಕ ಕೆಲಸವನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಯೋಜನೆ ಮಾಡಿ ವಿಕಸಿತ ಭಾರತ್ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್‌ಗೆ ಸೇರಿಸಲಾಗುತ್ತದೆ. ಈಗ, ನಿರ್ದಿಷ್ಟ, ಅನುಮೋದಿತ ಕಾರ್ಯಭಾರ ಇದ್ದಾಗ ಮಾತ್ರ ಕೆಲಸ ನೀಡುತ್ತಾರೆ. ರಾಜ್ಯಗಳು ಕನಿಷ್ಠ 125 ದಿನಗಳ ಕೆಲಸ ಕೊಡಬೇಕು. ಸಾಮರ್ಥ್ಯ ಇದ್ದರೆ ಅವು ಹೆಚ್ಚು ದಿನ ನೀಡಬಹುದು. 15 ದಿನಗಳಲ್ಲಿ ಕೆಲಸ ಸಿಗದಿದ್ದರೆ, ಭತ್ಯೆ ಕೊಡುತ್ತಾರೆ. ಈ ಕಾಯ್ದೆಯ ಮೂಲಕ ಕಾರ್ಮಿಕರು ಮತ್ತಷ್ಟು ಬಲಿಷ್ಠರಾಗಿದ್ದಾರೆ.
ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ
ಕೆಲಸಗಾರನು ಕೆಲಸ ಕೇಳಿದರೂ ನಿಗದಿತ ಅವಧಿಯಲ್ಲಿ ಕೆಲಸ ಸಿಗದಿದ್ದರೆ, ಅವನಿಗೆ ನಿರುದ್ಯೋಗ ಭತ್ಯೆ ಸಿಗುತ್ತದೆ. ಒಂದು ರಾಜ್ಯವು ನಿರ್ದಿಷ್ಟ ಹಂಚಿಕೆಗೆ ಮೀರಿ ಕೆಲಸ ನೀಡಿದರೆ, ಅದು ಆ ರಾಜ್ಯದ ನೀತಿ ಆಯ್ಕೆಯಾಗಿರುತ್ತದೆ, ಹಾಗಂತ ಯಾವುದೇ ಕಾನೂನು ಒತ್ತಾಯವಿಲ್ಲ. ಹಾಗೆ ಮಾಡಿದರೂ ಕಾರ್ಮಿಕರ ಹಕ್ಕುಗಳಿಗೆ ಯಾವುದೇ ಚ್ಯುತಿ ಬರದಂತೆ ಕಾಪಾಡಲಾಗುತ್ತದೆ.
ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಅಡಿಯಲ್ಲಿ ಕೆಲಸ ಹಂಚಿಕೆ ಹೆಚ್ಚು ವ್ಯವಸ್ಥಿತವಾಗಿದೆ. ಡೇಟಾ ಆಧಾರಿತ ಹಂಚಿಕೆ ವಂಚನೆ ಮತ್ತು ಸ್ಥಳೀಯ ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆ ಮಾಡುತ್ತದೆ. ಇದರಿಂದ ಯೋಜನೆ ಹೆಚ್ಚು ಪಾರದರ್ಶಕವಾಗಿ ಹಾಗೂ ನಿಯಂತ್ರಿತವಾಗಿ ನಡೆಯುತ್ತದೆ.
ಬಯೋಮೆಟ್ರಿಕ್ ಹಾಜರಾತಿಯಿಂದ ಏನು ಉಪಯೋಗ?
ಗ್ರಾಮೀಣ ಬಡತನ 2011-12ರಲ್ಲಿ ಶೇ 25.7 ರಷ್ಟಿತ್ತು. 2023-24ಕ್ಕೆ ಅದು ಶೇ. 4.86 ಕ್ಕೆ ಇಳಿದಿದೆ. ಹೀಗಾಗಿ ಉದ್ಯೋಗ ವ್ಯವಸ್ಥೆಯನ್ನು ಪುನರ್‌ರಚನೆ ಮಾಡಬೇಕಾಗುತ್ತಿದೆ. ಸಾವು, ವಲಸೆ ಇತ್ಯಾದಿ ಕಾರಣದಿಂದ ಹಲವಾರು ಫಲಾನುಭವಿಗಳ ಜಾಬ್ ಕಾರ್ಡ್ಗಳು ನಿಷ್ಕ್ರಿಯವಾಗುತ್ತಿವೆ. ಇವನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಹೀಗಾಗಿ, ಕೆಲಸದ ಸ್ಥಳದಲ್ಲಿ ಬಯೋಮೆಟ್ರಿಕ್ ಹಾಜರಾತಿ ನಿಯಮಗಳನ್ನು ಜಾರಿ ಮಾಡಲಾಗುತ್ತದೆ. ಇದರಿಂದ ಫಂಡ್ ಹಣ ಪೋಲಾಗುವುದು ತಪ್ಪುತ್ತದೆ.
For More Updates Join our WhatsApp Group :




