ಬೆಂಗಳೂರಿನಲ್ಲಿ ಅಂಡಾಣು ಮಾರಾಟ ಶಂಕೆ.

ಬೆಂಗಳೂರಿನಲ್ಲಿ ಅಂಡಾಣು ಮಾರಾಟ ಶಂಕೆ.

ಐವಿಎಫ್ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ನಿಗಾ

ಬೆಂಗಳೂರು : ಅಂಡಾಣು ಮಾರಾಟ ದಂಧೆ ಬಗ್ಗೆ ಶಂಕೆ ವ್ಯಕ್ತವಾದ ಕಾರಣ ಬೆಂಗಳೂರಿನ ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಮಹಾರಾಷ್ಟ್ರದಲ್ಲಿ ಅಂಡಾಣು ಮಾರಾಟ ದಂಧೆ ಬೆಳಕಿಗೆ ಬಂದ ಹಿನ್ನೆಲೆ, ಅದೇ ಮಾದರಿಯ ಜಾಲವು ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಸದ್ಯ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ನಿಗಾಕ್ಕೆ ಸೂಚನೆ ನೀಡಿದೆ.

ಮತ್ತೊಂದೆಡೆ, ಮಹಿಳೆಯರಿಗೆ ಹಣದ ಆಮಿಷವೊಡ್ಡಿ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಕರೆತಂದು, ಕಾನೂನುಬಾಹಿರವಾಗಿ ಅಂಡಾಣು ಸಂಗ್ರಹಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ.

ದೇಶದ ವಿವಿಧೆಡೆ ಹಬ್ಬಿದೆ ಅಂಡಾಣು ಮಾರಾಟ ಜಾಲ

ಅಂಡಾಣು ಮಾರಾಟ ಜಾಲವು ಬೆಂಗಳೂರು ಮಾತ್ರವಲ್ಲದೆ ತೆಲಂಗಾಣ ಹಾಗೂ ಮಹಾರಾಷ್ಟ್ರದ ನಾಗ್ಪುರ, ಪುಣೆ, ನಾಸಿಕ್ ನಗರಗಳವರೆಗೂ ವಿಸ್ತರಿಸಿದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.

ಅಮಾಯಕ ಮಹಿಳೆಯರ ಆರೋಗ್ಯ ಮತ್ತು ಜೀವವನ್ನು ಅಪಾಯಕ್ಕೆ ಒಳಪಡಿಸುವ ಈ ಕೃತ್ಯವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಮಾಹಿತಿಯನ್ನು ಕೋರಲಾಗಿದ್ದು, ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಮಗ್ರ ತನಿಖೆಗೆ ಸೂಚನೆ

ಸಮಗ್ರ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದ್ದಾರೆ. ಯಾವ ಆಸ್ಪತ್ರೆ, ಯಾವ ವೈದ್ಯರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂಬುದರ ಕುರಿತು ವಿವರವಾದ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಗೃಹ ಇಲಾಖೆಯ ಸಹಕಾರವನ್ನೂ ಪಡೆಯುವಂತೆ ಹೇಳಲಾಗಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐವಿಎಫ್ ಕೇಂದ್ರಗಳ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬಾಹಿರ ಚಟುವಟಿಕೆ ನಡೆದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರ ಆರೋಗ್ಯಕ್ಕೆ ಧಕ್ಕೆಯುಂಟುಮಾಡುವ ಯಾವುದೇ ಕೃತ್ಯ ಸಹಿಸಲಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದು, ಮಹಿಳೆಯರ ಸುರಕ್ಷತೆ ಸರ್ಕಾರದ ಆದ್ಯತೆ ಎಂದು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *