ನವದೆಹಲಿ: ಎನ್ಡಿಎ-III ಮೈತ್ರಿ ಸರ್ಕಾರದಲ್ಲಿ ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಿಂದಿನ ಸರ್ಕಾರದಲ್ಲಿ ಲೋಕಸಭಾಧ್ಯಕ್ಷರಾಗಿದ್ದ ಓಂ ಬಿರ್ಲಾ ಅವರೇ ಇನ್ನೊಂದು ಅವಧಿಗೆ ಮುಂದುವರಿಯಬಹುದು ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಲೋಕಸಭಾದ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಲಿದ್ದು, ಬಿಜೆಪಿಯ ಮಿತ್ರಪಕ್ಷಗಳು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಬಹುದು ಎಂದು ಮೂಲಗಳು ಹೇಳುತ್ತವೆ.
ಇದೇ ಜೂನ್ 24 ರಿಂದ ಪ್ರಾರಂಭವಾಗುವ 18 ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುಂಚಿತವಾಗಿ, ಸ್ಪೀಕರ್ ಆಯ್ಕೆಯ ಬಗ್ಗೆ ಒಮ್ಮತಕ್ಕೆ ಬರಲು ಎನ್ಡಿಎ ಮಿತ್ರಪಕ್ಷಗಳ ನಿರ್ಣಾಯಕ ಸಭೆಯು ಈ ವಾರ ನಡೆಯಲಿದೆ. ಈ ಸಭೆಯಲ್ಲಿ ಮಿತ್ರಪಕ್ಷಗಳಿಗೆ ಒಪ್ಪಿಗೆಯಾಗುವ ಸ್ಪೀಕರ್ ಆಯ್ಕೆ ಮಾಡುವುದು ಬಿಜೆಪಿ ಉದ್ದೇಶ. ಮಿತ್ರಪಕ್ಷಗಳೊಂದಿಗಿನ ಸಭೆಯಯಲ್ಲಿ ನಿರ್ಣಯವಾಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಜೂನ್ 26 ರಂದು ಪ್ರಧಾನ ಮಂತ್ರಿಯಿಂದ ಹೆಸರಿನ ಅಂತಿಮ ಘೋಷಣೆಯಾಗಲಿದೆ. ಇದೇ ದಿನ ಲೋಕಸಭಾಧ್ಯಕ್ಷರ ಹುದ್ದೆಗೆ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಇದು ಒಕ್ಕೂಟದ ಕಾರ್ಯತಂತ್ರದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಬಿಜೆಪಿ ನಾಯಕರು.
ಜೂನ್ 26 ರೊಳಗೆ ಸ್ಪೀಕರ್ ಆಯ್ಕೆಗೆ ಸರಿಯಾದ ಕ್ರಮವನ್ನು ರೂಪಿಸಲು ಜೂನ್ 20 ರಂದು ಎನ್ಡಿಎ ಮಿತ್ರಪಕ್ಷಗಳ ಸಭೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆ ಎಂಬ ಸಾಂವಿಧಾನಿಕ ಸ್ಥಾನಕ್ಕಾಗಿ ಬಿಜೆಪಿ ಸಂಸದೆ ಮತ್ತು ಆಂಧ್ರಪ್ರದೇಶದ ಪಕ್ಷದ ಮುಖ್ಯಸ್ಥೆ ಡಿ ಪುರಂದೇಶ್ವರಿ(ಈಗ ಆಂಧ್ರ ಪ್ರದೇಶದಲ್ಲಿ ಎನ್ಡಿಎ ಮೈತ್ರಿಕೂಟ ಪಾಲುದಾರ), ಮತ್ತು ಆರು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾಗಿದ್ದ ರಾಧಾ ಮೋಹನ್ ಸಿಂಗ್ ಅವರ ಹೆಸರುಗಳು ಕೇಳಿಬರುತ್ತಿವೆ. ಈ ಎರಡು ಹೆಸರುಗಳಲ್ಲಿ ಯಾವುದೇ ಒಮ್ಮತವು ಹೊರಹೊಮ್ಮದಿದ್ದರೆ, ಪ್ರಸ್ತುತ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ. ಲೋಕಸಭಾಧ್ಯಕ್ಷರ ಆಯ್ಕೆಯಲ್ಲಿ ಎನ್ ಡಿಎ ಮಿತ್ರಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲ ಎನ್ನುತ್ತಾರೆ.
ಮೈತ್ರಿಕೂಟದ ಪಾಲುದಾರರಿಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ಸಾಧ್ಯತೆ: ಬಿಜೆಪಿಯು ತನ್ನ ಎನ್ಡಿಎ ಮಿತ್ರಪಕ್ಷವಾದ ಟಿಡಿಪಿಗೆ ಉಪ ಸ್ಪೀಕರ್ ಸ್ಥಾನವನ್ನು ನೀಡಬಹುದು. ಸ್ಪೀಕರ್ ನೇಮಕದ ಜೊತೆಗೆ, ಲೋಕಸಭೆಯ ಉಪ ಸ್ಪೀಕರ್ ಹುದ್ದೆ ತೆಲುಗು ದೇಶಂ ಪಾರ್ಟಿ (TDP) ಯಂತಹ ಮೈತ್ರಿ ಪಾಲುದಾರರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ, ಇದು ಲೋಕಸಭೆಯಲ್ಲಿ ಎನ್ಡಿಎ ಒಳಗೆ ಪ್ರಾದೇಶಿಕ ಪ್ರಾತಿನಿಧ್ಯವನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ. ಎಲ್ಲರನ್ನೂ ಒಳಗೊಂಡ ಪರಿಣಾಮಕಾರಿ ಆಡಳಿತಕ್ಕೆ ಎನ್ಡಿಎ ಬದ್ಧವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಲೋಕಸಭೆಯ ಸ್ಪೀಕರ್ ಆಯ್ಕೆಗೆ ಸಂಬಂಧಿಸಿದ ಬೆಳವಣಿಗೆಯ ಬಗ್ಗೆ ತಿಳಿದಿರುವ ಬಿಜೆಪಿ ಹಿರಿಯ ನಾಯಕರೊಬ್ಬರು, ಮುಂಬರುವ ಸಂಸತ್ತಿನ ಅಧಿವೇಶನಕ್ಕೆ ಸಿದ್ಧತೆಗಳು ತೀವ್ರಗೊಂಡಿರುವಾಗ, ಲೋಕಸಭಾ ಸ್ಪೀಕರ್ ಆಯ್ಕೆಯು ಎನ್ಡಿಎ ಮೈತ್ರಿಕೂಟಕ್ಕೆ ಪ್ರಮುಖ ನಿರ್ಧಾರವಾಗಿದೆ. ಈಗ ನಡೆಯುತ್ತಿರುವ ಚರ್ಚೆಗಳು ಮತ್ತು ಒಮ್ಮತವನ್ನು ನಿರ್ಮಿಸುವ ಪ್ರಯತ್ನಗಳೊಂದಿಗೆ, ರಾಷ್ಟ್ರೀಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ತನ್ನ ನಾಯಕತ್ವದ ರಚನೆಯನ್ನು ಗಟ್ಟಿಗೊಳಿಸುವ ಗುರಿಯನ್ನು ಒಕ್ಕೂಟವು ಹೊಂದಿದೆ.
ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲು ಚುನಾವಣೆ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದರೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಮೊದಲ ನಿದರ್ಶನವಾಗಿದೆ. ಏಕೆಂದರೆ ಇಲ್ಲಿಯವರೆಗೆ ಲೋಕಸಭಾಧ್ಯಕ್ಷರನ್ನು ಒಮ್ಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಲೋಕಸಭೆಯಲ್ಲಿ ಎಂಎ ಅಯ್ಯಂಗಾರ್, ಜಿಎಸ್ ಧಿಲ್ಲೋನ್, ಬಲರಾಮ್ ಜಾಖರ್ ಮತ್ತು ಜಿಎಂಸಿ ಬಾಲಯೋಗಿ ಎರಡನೇ ಬಾರಿಗೆ ಸಭಾಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿದ್ದರು.