ನವದೆಹಲಿ: ಜುಲೈ ಅಂತ್ಯದಲ್ಲಿ ಮಂಡಿಸಲಾಗುವ 2024-25ನೇ ಸಾಲಿನ ಪೂರ್ಣ ಬಜೆಟ್ ಗೆ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮ ಒಕ್ಕೂಟ ಸಂಸ್ಥೆಗಳು, ರೈತ ಸಂಘಗಳು ಮತ್ತು ರಾಜ್ಯಗಳ ಹಣಕಾಸು ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಉದ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಸಭೆ ನಡೆಯುವ ನಿರೀಕ್ಷೆಯಿದ್ದರೆ, ರೈತ ಸಂಘಗಳು ಮತ್ತು ಅರ್ಥಶಾಸ್ತ್ರಜ್ಞರೊಂದಿಗಿನ ಸಮಾಲೋಚನೆಗಳು ಶುಕ್ರವಾರ ನಡೆಯುವ ಸಾಧ್ಯತೆಯಿದೆ. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಶನಿವಾರ ನವದೆಹಲಿಗೆ ಆಗಮಿಸಲಿರುವ ನಿರ್ಮಲಾ ಸೀತಾರಾಮನ್ ಇದೇ ದಿನದಂದು ರಾಜ್ಯಗಳ ಹಣಕಾಸು ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೂಲಕ 108 ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು (ಸಿಎಸ್ಎಸ್) ನಿರ್ವಹಿಸುತ್ತದೆ. 2024-25ರ ಹಣಕಾಸು ವರ್ಷದಲ್ಲಿ ಈ ಯೋಜನೆಗಳ ಬಜೆಟ್ ಅಂದಾಜು 5.01 ಲಕ್ಷ ಕೋಟಿ ರೂ. ಮತ್ತು 2023-24ರ ಹಣಕಾಸು ವರ್ಷದಲ್ಲಿ 4.76 ಲಕ್ಷ ಕೋಟಿ ರೂ. ಆಗಿದೆ. ಹೀಗಾಗಿ ಈ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಹಣಕಾಸು ಸಚಿವರೊಂದಿಗೆ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಹಿರಿಯ ಅಧಿಕಾರಿಗಳ ಪ್ರಕಾರ, ಸರ್ಕಾರದ 100 ದಿನಗಳ ಕಾರ್ಯಸೂಚಿಯ ಭಾಗವಾಗಿ ಈಗಾಗಲೇ ಬಜೆಟ್ಗಾಗಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದ್ದು ಈ ವಿಷಯಗಳನ್ನು ಬಜೆಟ್ನಲ್ಲಿ ಸೇರಿಸಲಾಗುವುದು. ಉದ್ಯಮ ಮತ್ತು ಕೃಷಿ ಸಂಸ್ಥೆಗಳೊಂದಿಗಿನ ಚರ್ಚೆಗಳು ಬಜೆಟ್ನಲ್ಲಿ ಯಾವೆಲ್ಲ ವಿಷಯಗಳನ್ನು ಸೇರಿಸಬೇಕೆಂಬ ಬಗ್ಗೆ ವಿಶಾಲ ದೃಷ್ಟಿಕೋನವನ್ನು ಪಡೆಯಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತವೆ.
ಲಖ್ ಪತಿ ದೀದಿ ಯೋಜನೆಗಳಂಥ ಮಹಿಳಾ ಸ್ವಸಹಾಯ ಗುಂಪುಗಳನ್ನು (ಎಸ್ಎಚ್ಜಿ) ಸಬಲೀಕರಣಗೊಳಿಸಲು ವಿಶೇಷ ಒತ್ತು ನೀಡುವ ಮೂಲಕ ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್ ಆದ್ಯತೆ ನೀಡುವ ನಿರೀಕ್ಷೆಯಿದೆ