ಜುಲೈನಲ್ಲಿ ಸಕಲೇಶಪುರ, ಬಳ್ಳೆಯಲ್ಲಿ ಅರ್ಜುನ ಆನೆ ಸ್ಮಾರಕ್ಕೆ ಶಿಲಾನ್ಯಾಸ

ಬೆಂಗಳೂರು: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ ಡಿಸೆಂಬರ್ 4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ ಹುತಾತ್ಮನಾದ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸಫಾರಿಗಾಗಿ ವಿಶೇಷ ವಿನ್ಯಾಸದೊಂದಿಗೆ ಸಿದ್ಧವಾಗಿರುವ 3 ಹೊಸ ಮಿನಿ ಬಸ್ ಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಹಾಸನ ಜಿಲ್ಲೆ ಯಸಳೂರು ಬಳಿ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಮತ್ತು ಅರ್ಜುನನ ಆವಾಸಸ್ಥಾನವಾಗಿದ್ದ, ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.

ಈ ಎರಡೂ ಸ್ಮಾರಕಗಳಲ್ಲಿ ಅರ್ಜುನ ಪ್ರತಿಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು ಜೊತೆಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವ ಮೂಲಕ ಜನರ ಮನದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು, 6 ತಿಂಗಳುಗಳ ಒಳಗಾಗಿ ಅಂದರೆ ಬರುವ ಡಿಸೆಂಬರ್ 4ರೊಳಗೆ ಅಂದರೆ ಅರ್ಜುನನ ಪ್ರಥಮ ಪುಣ್ಯತಿಥಿಯ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *