ಬೆಂಗಳೂರು: ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಮರು ಗಣಿಗಾರಿಕೆ ಚಟುವಟಿಕೆ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ಇಂದು ಅನುಮತಿ ನೀಡಿದೆ. ನಿಷ್ಕ್ರಿಯವಾಗಿದ್ದ 1,304 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸುವ ಕೇಂದ್ರದ ಪ್ರಸ್ತಾವನೆಗೆ ಸರ್ಕಾರ ಸಹಮತಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ನಿಷ್ಕ್ರಿಯಗೊಂಡಿರುವ ಗಣಿಗುತ್ತಿಗೆ ಪ್ರದೇಶದ 13 Tailing dumpsನ 1,304 ಎಕರೆಯಲ್ಲಿ ವಿಶೇಷ ಅಧಿಕಾರ ಚಲಾಯಿಸಿ ಗಣಿಗುತ್ತಿಗೆ ಚಟುವಟಿಕೆ ಮುಂದುವರೆಸಲು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
2022-23ನೇ ಸಾಲಿನವರೆಗೆ 75.24 ಕೋಟಿ ರೂ ಹೊಣೆಗಾರಿಕೆ ಬಾಕಿ ಮೊತ್ತ ಹಾಗೂ 2023-24ನೇ ಸಾಲಿನ ಮೊತ್ತವನ್ನೂ ಸಹ ರಾಜ್ಯಕ್ಕೆ ಪಾವತಿಸುವಂತೆ ಕೆಜಿಎಫ್ನಲ್ಲಿರುವ ಭಾರತ್ ಚಿನ್ನದ ಗಣಿ ಸಂಸ್ಥೆಯವರಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದರು.