ತುಮಕೂರು : ಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಇದುವರೆಗೆ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವ ಕೆಲಸ ಮುಗಿದಿಲ್ಲ.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸರಬರಾಜಾಗಿಲ್ಲ. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕ ಇನ್ನೂ ತಲುಪಿಲ್ಲ.
ಇದರಿಂದ ಶಿಕ್ಷಕರಿಗೆ ಬೋಧನೆ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಬೇಸಿಗೆ ರಜೆ ಮುಗಿಸಿಕೊಂಡು ಮೇ 31ರಿಂದ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕಲಿಕೆಗೆ ಬೇಕಾದ ಪುಸ್ತಕಗಳೇ ಶಾಲೆಗಳಲ್ಲಿ ಲಭ್ಯವಿಲ್ಲ!
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 2,101 ಸರ್ಕಾರಿ ಶಾಲೆ, 236 ಅನುದಾನಿತ, 304 ಅನುದಾನ ರಹಿತ ಶಾಲೆಗಳಿವೆ. ಎಲ್ಲ ಕಡೆ ಪ್ರಾರಂಭದಲ್ಲಿಯೇ ಪಠ್ಯಪುಸ್ತಕದ ಕೊರತೆ ಎದುರಾಗಿದೆ. ‘152 ಅನುದಾನ ರಹಿತ ಶಾಲೆ ಹೊರೆತು ಪಡಿಸಿ ಉಳಿದ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಿಸಲಾಗಿದೆ. ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಪುಸ್ತಕ ಬರುವುದು ವಿಳಂಬವಾಗುತ್ತಿದೆ. ಇದೇ ಕಾರಣದಿಂದ ಸರಬರಾಜು ತಡವಾಗುತ್ತಿದೆ’ ಎಂಬುವುದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉತ್ತರ. ಆದರೆ, ‘ಸರ್ಕಾರಿ ಶಾಲೆಯ ಮಕ್ಕಳಿಗೂ ಈವರೆಗೆ ಪುಸ್ತಕ ತಲುಪಿಲ್ಲ’ ಎಂದು ಅಲ್ಲಿನ ಶಿಕ್ಷಕರೇ ಹೇಳುತ್ತಿದ್ದಾರೆ.
ಪ್ರಮುಖವಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲ ವಿಭಾಗದ ಪಠ್ಯ ಪುಸ್ತಕ ಲಭಿಸಿಲ್ಲ. ಇದು ವಾರ್ಷಿಕ ಪರೀಕ್ಷೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಮಕ್ಕಳು, ಪೋಷಕರನ್ನು ಕಾಡುತ್ತಿದೆ. ಶಾಲೆ ಆರಂಭದ ದಿನದಿಂದ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು. ಮಕ್ಕಳು ಆಸಕ್ತಿಯಿಂದ ಶಾಲೆಗಳತ್ತ ಬರುತ್ತಿದ್ದಾರೆ. ಆದರೆ, ಪಠ್ಯ ಪುಸ್ತಕ ಅವರ ಕೈ ತಲುಪದೆ ಕಲಿಕೆ ಕುಂಠಿತಗೊಂಡಿದೆ.
ರಜೆ ಇದ್ದ ಸಮಯದಲ್ಲಿಯೇ ಪುಸ್ತಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಮಕ್ಕಳು ಮರಳಿ ಶಾಲೆಗೆ ಬರುವ ಹೊತ್ತಿಗೆ ಎಲ್ಲ ಸಿದ್ಧತೆ ಮಾಡಿಕೊಂಡು ಅವರನ್ನು ಕಲಿಕೆಗೆ ಅಣಿಗೊಳಿಸಬೇಕಿತ್ತು. ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ, ತಾತ್ಸಾರ ಭಾವನೆಯಿಂದ ಮಕ್ಕಳು ಪಾಠದಿಂದ ದೂರ ಉಳಿಯುವಂತಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವರ್ಷ ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹೊಸ ಪುಸ್ತಕ ಸಿಗುತ್ತಿಲ್ಲ. ಹಳೆಯ ಪುಸ್ತಕ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕನ್ನಡ, ಸಮಾಜ ವಿಜ್ಞಾನ ಪಠ್ಯಪುಸ್ತಕ ಇಲ್ಲದಿದ್ದರೆ ಪಾಠ ಮಾಡಲು ಆಗುವುದಿಲ್ಲ. ಪುಸ್ತಕ ಸಿಗದೆ ಮಕ್ಕಳ ಭವಿಷ್ಯವೇ ಅತಂತ್ರವಾಗಿದೆ.
‘ತಡವಾಗಿ ಪುಸ್ತಕ ಪೂರೈಸಿದರೆ ಮಕ್ಕಳು, ಶಿಕ್ಷಕರ ಮೇಲೆ ಹೊರೆಯಾಗಲಿದೆ. ಪರಿಪೂರ್ಣ ಕಲಿಕೆ ಸಾಧ್ಯವಾಗುವುದಿಲ್ಲ. ಶಿಕ್ಷಕರು ಒತ್ತಡದಲ್ಲಿ ಬೋಧನೆ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ವಾರ್ಷಿಕ ಪರೀಕ್ಷೆಯ ಒಳಗೆ ಎಲ್ಲ ಅಧ್ಯಾಯಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ. ಬೋಧನೆ, ಕಲಿಕೆ ಎರಡೂ ಅರ್ಧಂಬರ್ಧ ಆಗುತ್ತದೆ’ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.
ಪಠ್ಯ ಪುಸ್ತಕ ವಿತರಣೆಗೆ ಕ್ರಮ
ಎಲ್ಲ ತಾಲ್ಲೂಕುಗಳಿಗೆ ಪಠ್ಯ ಪುಸ್ತಕ ಸರಬರಾಜು ಆಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಪುಸ್ತಕ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಪುಸ್ತಕ ತಲುಪಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಮಂಜುನಾಥ್ ಪ್ರಭಾರಿ ಡಿಡಿಪಿಐ ತುಮಕೂರು