ತುಮಕೂರು:- ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ’ ರದ್ದು ಪಡಿಸಲು ಒತ್ತಾಯಿಸಿ ಜೂನ್ 25ರ ಮಂಗಳವಾರ ತುಮಕೂರು ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿಚಾರಕ್ಕೆ ಈಗಾಗಲೇ ಕಳೆದ 40 ದಿನಗಳಿಂದ ಹೋರಾಟ ತೀವ್ರವಾಗುತ್ತಲೇ ಬರುತ್ತಿದೆ. ಯೋಜನೆ ಕಾಮಗಾರಿ ಬಳಿ ಈಗಾಗಲೇ ಜಿಲ್ಲೆಯ ಬಿಜೆಪಿ-ಜೆಡಿಎಸ್ ನಾಯಕರು, ಸಂಘಟನೆ ಮುಖಂಡರು ಪಕ್ಷಾತೀತವಾಗಿ ಹೋರಾಟ ನಡೆಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನದ ಹೋರಾಟವೂ ನಡೆದಿದೆ. ಅದರ ಮುಂದುವರೆದ ಭಾಗವಾಗಿ ಜೂ.25ರಂದು (ಇಂದು) ತುಮಕೂರು ಬಂದ್ ಗೂ ಸಹ ಕರೆ ಕೊಡಲಾಗಿದೆ.
ಪ್ರತಿಭಟನಾ ಮೆರವಣಿಗೆ:- ಜೂನ್ 25ರಂದು ಜಿಲ್ಲಾ ಬಂದ್‌ಗೆ ಹೇಮಾವತಿ ನೀರಾವರಿ ಹೋರಾಟ ಸಮಿತಿ ಕರೆ ನೀಡಿದೆ. ಈಗಾಗಲೇ ನಾಲೆ ಬಳಿ ಹೋರಾಟ ನಡೆಸಿ, ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮನೆ ಬಳಿ ಪ್ರತಿಭಟನೆ ಮಾಡಿದ ಹೋರಾಟಗಾರರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ಅದರ ಮುಂದುವರಿದ ಭಾಗವಾಗಿ ಬಂದ್‌ಗೆ ಕರೆ ಕೊಟ್ಟಿದೆ. ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಜೈಲ್‌ಭರೋ, ಪಾದಯಾತ್ರೆ, ಗೋಲಿಬಾರ್‌ನಂತಹ ಯಾವ ಹೋರಾಟಕ್ಕೂ ನಾವು ಸಿದ್ದ ಎಂದಿರುವ ಹೋರಾಟಗಾರರು
ಜಿಲ್ಲೆಯ ಜನರಿಗಾಗಿ ನನ್ನ ಪ್ರಾಣ ನೀಡಲು ಸಿದ್ದರಿದ್ದೇವೆ ಎಂದಿದ್ದಾರೆ. ಜೂನ್ ೨೫ರಂದು ಬೆಳಗ್ಗೆ ೧೦:೩೦ಕ್ಕೆ ಟೌನ್‌ಹಾಲ್‌ನಿಂದ ಎಂ.ಜಿ.ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೆರವಣಿಗೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದರಲ್ಲಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘ,ಲಾರಿ,ಬಸ್, ಆಟೋ ಚಾಲಕರ ಸಂಘ,ಚಿನ್ನಬೆಳ್ಳಿ ಅಂಗಡಿ ಮಾಲೀಕರ ಸಂಘದವರು ಸಹ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂಗಡಿ ಮುಗ್ಗಟ್ಟು ಬಂದ್ ಸಾಧ್ಯತೆ:- ಹೇಮಾವತಿ ಲಿಂಕ್‌ಕೆನಾಲ್ ರದ್ಧು ಬಂದ್ ಗೆ ತುಮಕೂರು ಜಿಲ್ಲೆಯ ಅಂಗಡಿ ಮಗ್ಗಟ್ಟುಗಳ ಮಾಲೀಕರು ಸಹ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆ ಸೇರಿದಂತೆ ನಗರದಾದ್ಯಂತ ಅಂಗಡಿ ಮಗ್ಗಟ್ಟುಗಳು ಬಂದ್ ಆಗುವ ಸಾಧ್ಯತೆಯಿದೆ. ಆದರೆ, ಅಗತ್ಯ ವಸ್ತುಗಳ ವ್ಯಾಪಾರ-ವಹಿವಾಟು ಎಂದಿನಂತೆ ಇರಲಿದೆ. ಅದರಲ್ಲಿ ಯಾವುದೇ ಸಮಸ್ಯೆ ಆಗಲ್ಲ.
ಆಟೋ, ವಾಹನ ಸಂಚಾರ ವಿರಳ ಸಾಧ್ಯತೆ:- ಬಂದ್ ಹಿನ್ನೆಲೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಬಂದ್ ಗೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಲಾರಿ ಮಾಲೀಕರ ಸಂಘವೂ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಆಟೋ ಸಂಖ್ಯೆ ವಿರಳವಾಗುವ ಸಾಧ್ಯತೆಯಿದೆ. ಇನ್ನೂ ಖಾಸಗಿ ಬಸ್ ಸಂಚಾರವೂ ವಿರಳವಾಗುವ ಸಾಧ್ಯತೆಯಿದೆ.
ಬಾಕ್ಸ್
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ತುಮಕೂರು ಜಿಲ್ಲೆಯಾದ್ಯಂತ ಜೂನ್ ೨೫ ರಂದು ಬಂದ್‌ಗೆ ಕರೆ ನೀಡಿರುವ ಪ್ರಯುಕ್ತ
ಬಂದ್‌ಗೆ ಸಾಥ್ ನೀಡಿದ ಹಲವು ಸಂಘಟನೆಗಳು
ತುಮಕೂರು ನಗರದ ಅಂಗಡಿ ಮುಂಗಟ್ಟುಗಳಲ್ಲಿ ಬಿತ್ತಿಪತ್ರ ವಿತರಣೆ ಮಾಡಿ ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ತುಮಕೂರು ನಗರ ಬಂದ್‌ಗೆ ಸಹಕಾರ ನೀಡುವಂತೆ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.ನಗರದ ಎಂಜಿ ರಸ್ತೆ ಅಂಗಡಿ ಮತ್ತು ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಿದರು. ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಟರಾಜ್ ನೇತೃತ್ವದಲ್ಲಿ ಕರಪತ್ರ ವಿತರಣೆ ಮಾಡಲಾಯಿತು.
ಶಾಲಾ-ಕಾಲೇಜಿಗಿಲ್ಲ ರಜೆ:- ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಜೂನ್ 25ರಂದು ತುಮಕೂರು ಜಿಲ್ಲಾ ಬಂದ್’ಗೆ ಕರೆ ನೀಡಲಾಗಿದ್ದು, ಶಾಲಾಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ.
ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಸರ್ಕಾರಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಖಾಸಗಿಗೆ ರಜೆ: ಖಾಸಗಿ ಮತ್ತು ಅನುದಾನಿತ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು
ರೂಪ್ಪಾ(ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಒಕ್ಕೂಟ) ಅಧ್ಯಕ್ಷ ಹಾಲನೂರು ಲೇಪಾಕ್ಷ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾ ಬಂದ್ ಬೆಂಬಲಿಸಿ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಿಗೆ ಜೂನ್ 25ರಂದು ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ರಜೆ ಕೊಟ್ಟಿಲ್ಲ: ರೂಪಾ ಅಧ್ಯಕ್ಷ ಹಾಲನೂರು ಲೇಪಾಕ್ಷ ರಜೆ ಘೋಷಣೆ ಬಗ್ಗೆ ಹೇಳಿದ್ದಾರದರೂ ಬಹುತೇಕ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳು ರಜೆ ಘೋಷಣೆ ಮಾಡಿಲ್ಲ.