ಬೆಳಗಾವಿ : ಜಿಲ್ಲೆಯಲ್ಲಿ ಕಳೆದ 15 ತಿಂಗಳಲ್ಲಿ 90 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕೃಷಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಕಾಲಕ್ಕೆ ಪರಿಹಾರ ಕೈಗೆಟುಕದೆ ಕೆಲವರು ಅಲೆದಾಡುತ್ತಿದ್ದಾರೆ ಎನ್ನಲಾಗಿದೆ
ಜಿಲ್ಲೆಯಲ್ಲಿ ಏಳು ನದಿಗಳು ಹರಿದರೂ, ಕಳೆದ ವರ್ಷ 15 ತಾಲ್ಲೂಕುಗಳು ‘ಬರ’ದಿಂದ ತತ್ತರಿಸಿದ್ದವು.
ವರುಣ ಕೈಕೊಟ್ಟಿದ್ದರಿಂದ ಬಹುತೇಕ ಬೆಳೆ ಹಾನಿಗೀಡಾಗಿದ್ದವು. ಹಾಗಾಗಿ ಸಾಲಭಾದೆಯಿಂದ 2023-24ರಲ್ಲಿ 82 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2024ರ ಏ.1ರಿಂಂದ ಜೂ.27ರವರೆಗೆ 8 ಮಂದಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
20 ಅರ್ಜಿ ತಿರಸ್ಕೃತ: ‘2023-24ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಡಿ ಪರಿಹಾರ ಕೋರಿ 102 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 20 ಅರ್ಜಿ ತಿರಸ್ಕೃತವಾಗಿವೆ. ಜಿಲ್ಲಾಧಿಕಾರಿ, ಆಯಾ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಗಳು 82 ಅರ್ಜಿಗಳಿಗೆ ಅನುಮೋದನೆ ನೀಡಿವೆ. ಪ್ರಸಕ್ತ ಸಾಲಿನಲ್ಲಿ ಸಲ್ಲಿಕೆಯಾದ 8 ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಕೃಷಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಮಾನದಂಡ ಅನುಸರಿಸಿದರೆ, ಆತ್ಮಹತ್ಯೆಗೀಡಾದ ರೈತನ ಅವಲಂಬಿತರಿಗೆ ಒಂದು ತಿಂಗಳಲ್ಲೇ ಪರಿಹಾರ ಕೊಡಬಹುದು’ ಎಂದರು.