ರೈತರಿಗೆ ಬಿತ್ತನೆ ಬೀಜ ಬೆಲೆ ಏರಿಕೆ ಬಿಸಿ

ಹೊಸಕೋಟೆ: ತಾಲ್ಲೂಕಿನ ರೈತ ಸಮುದಾಯ ಈಗಾಗಲೇ ಬರಗಾಲದಿಂದ ತತ್ತರಿಸಿದ್ದಾರೆ. ನಷ್ಟದಿಂದ ಹೊರ ಬರಲು ಪರದಾಡುತ್ತಿರುವ ಸಮಯದಲ್ಲೇ ಬಿತ್ತನೆ ಬೀಜದ ಬೆಲೆ ಹೆಚ್ಚಳ ಮಾಡಿ ಮತ್ತೊಂದು ಬರೆ ಎಳೆಯಲು ಸರ್ಕಾರ ಮುಂದಾಗಿದೆ.

2024-25ನೇ ಸಾಲಿನ ಕೃಷಿ ಚಟುವಟಿಕೆ ಕ್ಷೇತ್ರದಾದ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿದೆ.

ತಾಲ್ಲೂಕಿನಾದ್ಯಂತ ಈ ಬಾರಿ ಅತ್ಯುತ್ತಮ ಮಳೆಯಾಗುತ್ತಿದೆ. ರೈತರು ಕೃಷಿ ಭೂಮಿ ಬಿತ್ತನೆಗಾಗಿ ಹದ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆದರೆ, ದರ ಹೆಚ್ಚಳ ರೈತರನ್ನು ಚಿಂತೆಗೆ ದೂಡಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಪ್ರಭುದೇವಯ್ಯ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಬಿತ್ತನೆ ಕಾರ್ಯಕ್ಕೆ ಬೇಕಾದ ಬಿತ್ತನೆ ಬೀಜ ಬೆಲೆ ದುಪ್ಪಟ್ಟಾಗಿದೆ. ಈಗಾಗಲೇ ರೈತ ಬರಗಾಲದಿಂದ ತತ್ತರಿಸಿದ್ದಾನೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ50ರಷ್ಟು ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ರೈತರ ಬಗ್ಗೆ ದುಪ್ಪಟ್ಟು ಕಾಳಜಿ ಪ್ರದರ್ಶನ ಮಾಡುವ ಸರ್ಕಾರ ಈ ಬಾರಿ ಬಿತ್ತನೆ ಬೀಜ ಬೆಲೆ ಏರಿಕೆ ಮಾಡುವುದನ್ನು ಬಿಟ್ಟು, ಉಚಿತವಾಗಿ ರೈತರಿಗೆ ನೀಡುವ ಕೆಲಸ ಮಾಡಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಹೊಸಕೋಟೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ನಮಗೆ ಬಂದಿರುವ ನಿರ್ದೇಶನದಂತೆ ಇಲಾಖೆ ಕೆಲಸ ಕಾರ್ಯ ಮಾಡುತ್ತೇವೆ. ಬಿತ್ತನೆ ಬೀಜ ಮಾರಾಟದಲ್ಲಿಯೂ ಇಲಾಖೆ ಸೂಚನೆ ತಪ್ಪದೆ ಪಾಲಿಸುತ್ತೇವೆ ಎಂದರು.

Leave a Reply

Your email address will not be published. Required fields are marked *