ಬೆಂಗಳೂರು: ನಟ ದರ್ಶನ್ ತೂಗುದೀಪ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ತನ್ನ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಸಭ್ಯ ಮೆಸೇಜ್ ಮಾಡಿದ್ದ ಕಾರಣಕ್ಕೆ ಈ ದುರಂತ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಸಿನಿಮಾರಂಗ ಘಟನೆ ಬಗ್ಗೆ ಮೌನಹಿಸಿದೆ.
ಹಲವು ಕಲಾವಿದರು ರೇನೂಕಾಸ್ವಾಮಿಗೆ ನ್ಯಾಯ ಸಿಗಬೇಕು ಎನ್ನುತ್ತಲೆ ನಟ ದರ್ಶನ್ ಅವರ ಪಾತ್ರದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದಿದೆ. ಇತ್ತೀಚೆಗೆ ನಟಿ ಭಾವನ ರಾಮಣ್ಣ ಏನೇ ಆದರೂ ನಾನು ದರ್ಶನ್ ಪರವೇ ಎಂದು ಹೇಳಿದ್ದರು. ಈಗ ಪರಭಾಷಾ ನಟ ನಾಗ ಶೌರ್ಯ ಅವರು ದರ್ಶನ್ಗೆ ಬೆಂಬಲ ನೀಡಿದ್ದಾರೆ. ‘ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ’ ಎಂದು ಹೇಳಿದ್ದಾರೆ.
ದರ್ಶನ್ಗೆ ಬೆಂಬಲ ನೀಡಿದ ಮೊದಲ ತೆಲುಗು ನಟ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ಗೆ ಬೆಂಬಲ ನೀಡಲು ಟಾಲಿವುಡ್ ಹೀರೋ ನಾಗ ಶೌರ್ಯ ಮುಂದೆ ಬಂದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ನಟ ದರ್ಶನ್ ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ” ಮೃತರ ಕುಟುಂಬದ ಬಗ್ಗೆ ಕೇಳಿದಾಗ ನನ್ನ ಮನಸ್ಸು ಮರುಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ” ಎಂದಿದ್ದಾರೆ.
“ಆದರೆ, ಜನರು ಈ ವಿಷಯದ ಬಗ್ಗೆ ತಮ್ಮದೆ ತೀರ್ಮಾನಗಳಿಗೆ ಬರುವುದನ್ನು ನೋಡುವುದು ನಿರಾಶಾದಾಯಕವಾಗಿದೆ. ದರ್ಶನ್ ಅಣ್ಣ ತಮ್ಮ ಕೆಟ್ಟ ಕನಸಿನಲ್ಲಿಯೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್ ಅವರನ್ನು ಚೆನ್ನಾಗಿ ಬಲ್ಲವರಿಗೆ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಗುಣ ತಿಳಿದಿದೆ. ಅವರು ಯಾವಾಗಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಮತ್ತು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ” ಎಂದು ತಿಳಿಸಿದ್ದಾರೆ.
“ನನ್ನ ಕೆಟ್ಟ ಭಯದಲ್ಲಿಯೂ ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ ಮತ್ತು ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ ಎಂದು ನಂಬುತ್ತೇನೆ. ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣಾ ಅವರು ನಿರಪರಾಧಿ ಎಂದು ಸಾಬೀತಾಗುತ್ತಾರೆ. ನಿಜವಾದ ಅಪರಾಧಿ ಯಾರೆಂದು ತಿಳಿಯುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಸುದೀರ್ಘ ಟಿಪ್ಪಣಿ ಬರೆದಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್
ದರ್ಶನ್ ಅವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಈ ಪ್ರಕರಣ ಈಗಾಗಲೇ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ನಟ ಪ್ರಸ್ತುತ ಜೈಲಿನಲ್ಲಿದ್ದಾರೆ. ಪ್ರಕರಣದ ತೀರ್ಪು ಇನ್ನೂ ಹೊರಬಿದ್ದಿಲ್ಲ. ಈ ಪ್ರಕರಣದಲ್ಲಿ ದರ್ಶನ್ಗೆ ಬೆಂಬಲ ನೀಡಿದ ಮೊದಲ ಟಾಲಿವುಡ್ ಹೀರೋ ನಾಗ ಶೌರ್ಯ.
ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹದಿನೇಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಲ್ಲರೂ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಆರೋಪಿಗಳಿಗೆ ಗರಿಷ್ಠ ಜೈಲು ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ