ರಾಮನಗರ || ಜಿಲ್ಲೆ ಹೆಸರು ಬದಲಾವಣೆ ಮತ್ತೆ ಮುನ್ನೆಲೆಗೆ

ರಾಮನಗರ: ‘ನಾವು ರಾಮನಗರದವರಲ್ಲ. ಬದಲಿಗೆ, ಬೆಂಗಳೂರು ಜಿಲ್ಲೆಯವರು. ಮುಂದೊಂದು ದಿನ ಕನಕಪುರವು ಬೆಂಗಳೂರು ವ್ಯಾಪ್ತಿಗೆ ಸೇರಲಿದೆ…’- ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಳೆದ ಅಕ್ಟೋಬರ್ನಲ್ಲಿ ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ಭಾಷಣದಲ್ಲಿ ಹೇಳಿದ್ದ ಮಾತಿದು.

ಈ ಹೇಳಿಕೆ ರಾಮನಗರ ಜಿಲ್ಲೆಯ ಅಸ್ತಿತ್ವ ಹಾಗೂ ನಂತರ ಮರುನಾಮಕರಣ ಕುರಿತ ಚರ್ಚೆಗೆ ಗ್ರಾಸವಾಗಿತ್ತು. ಪರ-ವಿರೋಧಕ್ಕೂ ಕಾರಣವಾಗಿದ್ದ ಆ ಚರ್ಚೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಕಳೆದುಕೊಂಡಿತ್ತು.

ಇದೀಗ ಚನ್ನಪಟ್ಟಣ ಉಪ ಚುನಾವಣೆ ಸಮೀಪಿಸುತ್ತಿರುವಾಗ ಎರಡು ದಿನಗಳ ಹಿಂದೆ (ಜೂನ್ 3) ಶಿವಕುಮಾರ್ ಮತ್ತೆ, ‘ರಾಮನಗರ ಶೀಘ್ರ ಬೆಂಗಳೂರು ಜಿಲ್ಲೆಗೆ ಸೇರಲಿದೆ. ಜಿಲ್ಲೆಯ ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ಎಲ್ಲವೂ ಬೆಂಗಳೂರು ಜಿಲ್ಲೆಗೆ ಸೇರಲಿವೆ. ಇನ್ನೆರಡು ದಿನ ಕಾದು ನೋಡಿ, ಇದಕ್ಕೆಲ್ಲಾ ಉತ್ತರ ಸಿಗಲಿದೆ…’ ಎಂದಿದ್ದಾರೆ.

ಸರಿಯಾಗಿ 17 ವರ್ಷಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಡಿಸಿ ರಾಮನಗರ ಜಿಲ್ಲೆ ರಚಿಸಿದ್ದಕ್ಕೆ ಶಿವಕುಮಾರ್ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದಕ್ಕೆ, ಅವರ ರಾಜಕೀಯ ವಿರೋಧಿ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆ ಘೋಷಿಸಿದ್ದು ಒಂದು ಕಾರಣವಾದರೆ, ಜಿಲ್ಲೆಗಿದ್ದ ಬೆಂಗಳೂರು ಎಂಬ ಹೆಸರಿನ ಬ್ರ್ಯಾಂಡ್ನ ಕೊಂಡಿ ಕಳಚಿಕೊಂಡಿದ್ದು ಮತ್ತೊಂದು ಕಾರಣ.

ಜಿಲ್ಲೆ ರಚನೆಯಾದಾಗಿನಿಂದಲೂ ಹಲವು ಏಳುಬೀಳುಗಳನ್ನು ಕಂಡಿರುವ ಜಿಲ್ಲೆ, ಮತ್ತೆ ಬೆಂಗಳೂರಿನ ಭಾಗವಾಗಲಿದೆಯೇ ಅಥವಾ ಮರು ನಾಮಕರಣಗೊಳ್ಳಲಿದೆಯೇ ಎಂಬ ಕುತೂಹಲ ಮತ್ತೆ ಶುರುವಾಗಿದೆ. ಇದರಿಂದ ಆಗುವ ಲಾಭ-ನಷ್ಟಗಳ ಲೆಕ್ಕಾಚಾರ ಕುರಿತು ಸಾರ್ವಜನಿಕ ವಲಯದಲ್ಲೂ ಚರ್ಚೆ ಗರಿಗೆದರಿದೆ.

ಬೆಂಗಳೂರು ದಕ್ಷಿಣವಾಗಲಿದೆಯೇ?:

‘ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿ, ರಾಮನಗರವನ್ನು ವಿಭಾಗವಾಗಿಸುವ ಆಲೋಚನೆ ಡಿಸಿಎಂ ಅವರದ್ದು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಕಚೇರಿಗಳನ್ನು ರಾಮನಗರದಲ್ಲೇ ಉಳಿಸಿ, ಜಿಲ್ಲೆಗೆ ಬೆಂಗಳೂರು ಹೆಸರು ಜೋಡಿಸುವುದಷ್ಟೇ ಅವರ ಇರಾದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಅಥವಾ ಮರುನಾಮಕರಣದ ಮಾತಿನ ಜೊತೆಗೆ ಶಿವಕುಮಾರ್, ‘ನಿಮ್ಮ ಆಸ್ತಿ ಮಾರಬೇಡಿ. ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಸಾಧ್ಯವಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಶಕ್ತಿಯನ್ನು ಆ ದೇವರು ನನಗೆ ನೀಡಿದ್ದಾನೆ. ಆ ಕೆಲಸವನ್ನು ನಾನು ಮಾಡುತ್ತೇನೆ’ ಎಂದು ಭರವಸೆ ನೀಡುತ್ತಾ ಬಂದಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಯು ಹತ್ತಿರಕ್ಕೆ ಬರುತ್ತಿದ್ದಂತೆ, ಡಿಸಿಎಂ ಜಿಲ್ಲೆಯ ಹೆಸರು ಬದಲಾವಣೆ ಅಥವಾ ಬೆಂಗಳೂರಿಗೆ ಸೇರ್ಪಡೆಯ ಕಿಡಿಯನ್ನು ಹೊತ್ತಿಸಿದ್ದಾರೆ. ನಿಜಕ್ಕೂ ಇದರ ಹಿಂದೆ ಅಭಿವೃದ್ಧಿ ಉದ್ದೇಶವಿದೆಯೇ ಅಥವಾ ಚುನಾವಣೆ ಗಿಮಿಕ್ಕಾ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯಾಂಶಗಳು

* 2007ರಲ್ಲಿ ರಾಮನಗರ ಜಿಲ್ಲೆ ಉದಯ.

* ಜಿಲ್ಲೆಯು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಪೈಕಿ, 3ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್ ಗೆದ್ದಿದ್ದ ಚನ್ನಪಟ್ಟಣವು ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದು, ಉಪ ಚುನಾವಣೆಯ ನಿರೀಕ್ಷೆಯಲ್ಲಿದೆ.

* ಜಿಲ್ಲೆಯು ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ತಾಲ್ಲೂಕುಗಳನ್ನು ಒಳಗೊಂಡಿದೆ.

* 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 10,82,739 ಜನಸಂಖ್ಯೆ ಇದೆ.

ಅಭಿವೃದ್ಧಿಗಾಗಿ ‘ಬೆಂಗಳೂರು’ ಬ್ರ್ಯಾಂಡ್

‘ಜಿಲ್ಲೆಯ ಹೆಸರಿನ ಜೊತೆಗೆ ಬೆಂಗಳೂರು ಎಂಬ ಹೆಸರಿನ ಬ್ರ್ಯಾಂಡ್ ಇದ್ದರೆ ಅಭಿವೃದ್ಧಿಯ ಬಾಗಿಲುಗಳು ತೆರೆದುಕೊಳ್ಳುತ್ತದೆ. ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಅವರು ಕೈಗಾರಿಕೆ ಮೆಟ್ರೊ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಬೆಂಗಳೂರಿನಾಚೆಗೆ ವಿಸ್ತರಿಸಲು ಜಿಲ್ಲೆಗೆ ಮರುನಾಮಕರಣದ ಅಗತ್ಯವಿದೆ. ಅದೇ ಕಾರಣಕ್ಕೆ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಆಲೋಚನೆಯನ್ನು ಡಿಸಿಎಂ ಮಾಡಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು. ‘ಬೆಂಗಳೂರು ಹೆಸರಿದ್ದರೆ ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಬಹುದು. ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಸ್ಥೆಗಳ ಸ್ಥಾಪನೆಗೂ ಅನುಕೂಲವಾಗಲಿದೆ. ಈಗಾಗಲೇ ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪನೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಜಿಲ್ಲೆಯು ಇದೀಗ ಮೆಟ್ರೊ ರೈಲು ವಿಸ್ತರಣೆಯನ್ನು ಎದುರು ನೋಡುತ್ತಿದೆ. ಜಿಲ್ಲೆಯ ಹೆಸರು ಬದಲಾವಣೆಯಾದರೆ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ತೀವ್ರವಾಗಿ ವಿರೋಧಿಸಿದ್ದ ಎಚ್ಡಿಕೆ

ಡಿಸಿಎಂ ಹೇಳಿಕೆಗೆ ಕುಮಾರಸ್ವಾಮಿ ಅವರು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ‘ಕನಕಪುರ ಸುತ್ತಮುತ್ತಲಿರುವ ತಮ್ಮ ಬೇನಾಮಿ ಆಸ್ತಿ ಸಕ್ರಮ ಮಾಡಿಕೊಳ್ಳಲು ಹೊಸ ನಾಟಕ ಶುರುವಾಗಿದೆ. ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಂಡು ಖಜಾನೆ ತುಂಬಿಸಿಕೊಳ್ಳುವ ಹುನ್ನಾರ. ಇದು ರಾಮನಗರ ಜಿಲ್ಲೆಯ ಜನರಿಗೆ ಮಾಡುವ ದ್ರೋಹ ಮತ್ತು ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ’ ಎಂದು ಟೀಕಿಸಿದ್ದರು. ಎಚ್ಡಿಕೆ ಮಾತಿಗೆ ದನಿಗೂಡಿಸಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸೇರಿದಂತೆ ಸ್ಥಳೀಯ ಜೆಡಿಎಸ್ ಕಾಂಗ್ರೆಸ್ ಮುಖಂಡರು ಕನ್ನಡಪರ ಮತ್ತು ರೈತ ಸಂಘಟನೆಗಳ ಮುಖಂಡರು ಸಹ ಡಿಕೆಶಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಮತ್ತೆ ಮುನ್ನೆಲೆಗೆ ಬಂದಿರುವ ಜಿಲ್ಲೆ ಹೆಸರು ಬದಲಾವಣೆಗೆ ಯಾವ ಪ್ರತಿಕ್ರಿಯೆ ಬರಲಿದೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *