ಬೆಂಗಳೂರು : ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಕರ್ನಾಟಕ, ದೆಹಲಿ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಮಳೆ ಎಚ್ಚರಿಕೆ ನೀಡಿದ್ದು, ಗೋವಾದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಗೋವಾ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ.
ಜುಲೈ 9 ರ ಮುಂಜಾನೆ ಮುಂಬೈ ನಗರದಲ್ಲಿ ಕೇವಲ ಮೂರು ಗಂಟೆಗಳಲ್ಲಿ 176 ಮಿಮೀ ಮಳೆ ಸುರಿದಿದ್ದು, ಮಹಾರಾಷ್ಟ್ರದ ಮುಂಬೈನಲ್ಲಿಯೂ ಮಂಗಳವಾರ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಐಎಂಡಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕರಾವಳಿ ರಾಜ್ಯದಲ್ಲಿ ಮಾನ್ಸೂನ್ ಸಕ್ರಿಯವಾಗಿದೆ ಎಂದಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯ ಬಗ್ಗೆ ಮಯನ್ನೆಚ್ಚರಿಕೆ ನೀಡಿದೆ. ಜುಲೈ 11 ಮತ್ತು 12 ರಂದು ಗೋವಾ ರಾಜ್ಯಗಳ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ನೀಡಿದೆ. ಇದಲ್ಲದೆ, ಈ ವಾರ 10 ಇತರ ರಾಜ್ಯಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ, ತ್ರಿಪುರಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಿಗೆ ಈ ವಾರ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.
ಉತ್ತರಾಖಂಡದಲ್ಲಿ ನಿಲ್ಲದ ಮಳೆ
ಹವಾಮಾನ ಇಲಾಖೆಯು ಜುಲೈ 9 ಕ್ಕೆ ಉತ್ತರಾಖಂಡಕ್ಕೆ ಮಳೆಯ ಎಚ್ಚರಿಕೆಯನ್ನು ನೀಡಿದೆ. ಮಿಂಚು ಮತ್ತು ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. “ಜುಲೈ 10 ರಂದು ತೆಹ್ರಿ, ಪೌರಿ, ಬಾಗೇಶ್ವರ್, ಅಲ್ಮೋರಾ, ನೈನಿತಾಲ್ ಮತ್ತು ಚಂಪಾವತ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ” ಎಂದು ಐಎಂಡಿ ತಿಳಿಸಿದೆ.
ದೆಹಲಿಗೆ ಸಂಬಂಧಿಸಿದಂತೆ, ಹವಾಮಾನ ಇಲಾಖೆಯು ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಂಗಳವಾರ ದೆಹಲಿಯಲ್ಲಿ ಕನಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಇದ್ದು, ದಿನದ ಮುಂಜಾನೆ ನಗರದ ಕೆಲವು ಭಾಗಗಳಲ್ಲಿ ಸ್ವಲ್ಪ ಮಳೆಯಾಗಿದೆ.
ಮುಂಬೈ ಮತ್ತು ಪುಣೆಗೆ ಐಎಂಡಿ ಸೋಮವಾರ ರೆಡ್ ಅಲರ್ಟ್ ನೀಡಿದ್ದು, ಮಂಗಳವಾರ ಎರಡೂ ನಗರಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ಭಾರೀ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಜಲಾವೃತವಾಗಿರುವ ಕಾರಣ ರಾಯಗಡದ ಶಿಕ್ಷಣ ಸಂಸ್ಥೆಗಳನ್ನು ಸಹ ಮುಚ್ಚಲಾಗಿದೆ.
ಪಾಲ್ಘರ್, ಥಾಣೆ, ಧುಲೆ, ನಂದೂರ್ಬಾರ್, ಜಲಗಾಂವ್, ನಾಸಿಕ್, ಅಹ್ಮದ್ನಗರ, ಕೊಲ್ಲಾಪುರ, ಸಾಂಗ್ಲಿ, ಶೋಲಾಪುರ್, ಔರಂಗಾಬಾದ್, ಜಲ್ನಾ, ಪರ್ಭಾನಿ, ಬೀಡ್, ಹಿಂಗೋಲಿ, ನಾಂದೇಡ್, ಲಾತೂರ್, ಉಸ್ಮಾನಾಬಾದ್, ಅಕೋಲಾ, ಅಮರಾವತಿ, ಬುಲ್ಧಾನ, ಚಂದ್ರಾಪುರ, ಗಡ್ಚಿರೋಲಿ, ಗೊಂಡಿಯಾ, ನಾಗ್ಪುರ, ವಾರ್ಧಾ, ವಾಶಿಮ್ ಮತ್ತು ಯವತ್ಮಾಲ್, ಭಂಡಾರಾದಲ್ಲಿ ಜುಲೈ 12 ರವರೆಗೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.