ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಪ್ರಕರಣದ ತನಿಖೆ ಮುಂದುವರಿದಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, 2005ರಲ್ಲಿ ಮಾಸ್ ಹಿಟ್ ಆಗಿದ್ದ ‘ಶಾಸ್ತ್ರೀ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಹೌದು, ದರ್ಶನ್ ಸಿನಿಮಾ ಕೆರಿಯರ್‌ನ ಹಿಟ್ ಚಿತ್ರಗಳ ಪೈಕಿ ಒಂದಾಗಿರುವ ‘ಶಾಸ್ತ್ರೀ’ ಇದೇ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ.
ದರ್ಶನ್ ಜೈಲಿನಲ್ಲಿದ್ದು, ಇದೇ ಸಂದರ್ಭದಲ್ಲಿ ವಿತರಕ ವಿ.ಎಂ.ಶಂಕರ್ ಅವರು ಸಿನಿಮಾ ಮರು ಬಿಡುಗಡೆ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, “ಈ ವಾರ ಒಂದೂ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹೀಗಾಗಿ ನಾನು ‘ಶಾಸ್ತ್ರೀ’ ಸಿನಿಮಾವನ್ನು ಸುಮಾರು 50 ಥಿಯೇಟರ್ಗಳಲ್ಲಿ ರೀ ರಿಲೀಸ್ ಮಾಡುತ್ತಿದ್ದೇನೆ. ಕೆ.ಜಿ ರಸ್ತೆಯ ತ್ರಿವೇಣಿ ಅಥವಾ ಸಂತೋಷ್ ಥಿಯೇಟರ್ನಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇನೆ. ‘ಕಾಟೇರ’ ರಿಲೀಸ್ ಆದಾಗ ಅದೆಷ್ಟೋ ಚಿತ್ರಮಂದಿರಗಳು ತೆರೆದವು. ದರ್ಶನ್ ಪ್ರಕರಣಕ್ಕೂ ಸಿನಿಮಾ ರಿಲೀಸ್ಗೂ ಯಾವುದೇ ಸಂಬಂಧವಿಲ್ಲ. ಸುಮಾರು ಆರು ತಿಂಗಳ ಹಿಂದೆ ರೀ ರಿಲೀಸ್ಗೆ ರೆಡಿ ಮಾಡಿಟ್ಟುಕೊಂಡಿದ್ದೆವು. ‘ಶಾಸ್ತ್ರೀ’ ನಿರ್ಮಾಪಕ ಅಣಜಿ ನಾಗರಾಜ್ ಅವರಿಂದ ಈ ಸಿನಿಮಾ ರೈಟ್ಸ್ ಪಡೆದು ಮರು ಬಿಡುಗಡೆ ಮಾಡುತ್ತಿದ್ದೇನೆ. ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಪ್ರೇಕ್ಷಕರು ಬಂದೇ ಬರುತ್ತಾರೆಂಬ ನಂಬಿಕೆ ಇದೆ. ಈ ಹಿಂದೆ ‘ಎ’ ಸಿನಿಮಾವನ್ನೂ ನಾವೇ ರೀ-ರಿಲೀಸ್ ಮಾಡಿದ್ದೆವು. ಆಗಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು” ಎಂದು ತಿಳಿಸಿದರು