ಮಂಗಳೂರು: ಇಲ್ಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ದರೋಡೆ ನಡೆಸಿ, ಐದೇ ಗಂಟೆಯಲ್ಲಿ ಬಂಧಿಸಲ್ಪಟ್ಟಿದ್ದ ಚಡ್ಡಿ ಗ್ಯಾಂಗ್ನ ಇಬ್ಬರು ಆರೋಪಿಗಳು ಸ್ಥಳ ಮಹಜರು ವೇಳೆ ಪರಾರಿಗೆ ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರಾಜು ಸಿಂಗ್ವಾನಿಯ (24) ಹಾಗೂ ಬಾಲಿ (22) ಗಾಯಗೊಂಡ ಆರೋಪಿಗಳು.
ನಗರದ ಹೊರವಲಯದ ಮುಲ್ಕಿ ಬಳಿ ಬುಧವಾರ ಬೆಳಗ್ಗೆ ಘಟನೆ ನಡೆದಿದೆ. ಮಂಗಳವಾರ ಮುಂಜಾನೆ ದೇರೆಬೈಲು ಗ್ರಾಮದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಭಾಗಿಯಾಗಿದ್ದ ಆರೋಪಿಗಳು, ಬೆಂಗಳೂರಿಗೆ ಪರಾರಿಯಾಗುತ್ತಿದ್ದಾಗ ಹಾಸನದಲ್ಲಿ ಬಂಧಿಸಲಾಗಿತ್ತು. ಇಂದು ಬೆಳಗ್ಗೆ ಕಾರು ಬಿಟ್ಟು ಪರಾರಿಯಾಗಿದ್ದ ಸ್ಥಳಕ್ಕೆ ಮಹಜರು ಮಾಡಲು ಕೊಂಡೊಯ್ಯಲಾಗಿತ್ತು. ಈ ವೇಳೆ ಇಬ್ಬರು ಪೊಲೀಸರನ್ನು ತಳ್ಳಿಕೊಂಡು ಪರಾರಿಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿದೆ. ಗಾಯಾಳು ಆರೋಪಿಗಳು ಮತ್ತು ಇಬ್ಬರು ಪೊಲೀಸರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಗ್ಯಾಂಗ್: ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ್ದ ನಾಲ್ವರ ಗ್ಯಾಂಗ್ ದೇರೆಬೈಲು ಗ್ರಾಮದ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆಯ ಕಿಟಕಿಯ ಗ್ರಿಲ್ ತುಂಡರಿಸಿ ಒಳ ಪ್ರವೇಶಿಸಿತ್ತು. ನಿದ್ರೆಯಲ್ಲಿದ್ದ ಮೆಂಡೋನ್ಸಾ ಹಾಗೂ ಪತ್ನಿ ಪ್ಯಾಟ್ರಿಸಿಯಾಗೆ ಬೆದರಿಸಿ, ಹಲ್ಲೆಗೈದು, ಮೊಬೈಲ್ ಫೋನ್ಗಳನ್ನು ಜಖಂಗೊಳಿಸಿದ್ದರು. ಆ ಬಳಿಕ ಕಪಾಟಿನ ಲಾಕರ್ನಲ್ಲಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಮೊಬೈಲ್ ಫೋನ್ ಮತ್ತು 1 ಲಕ್ಷ ರೂ. ಮೌಲ್ಯದ 10 ಬ್ರ್ಯಾಂಡೆಡ್ ವಾಚ್ಗಳು, 3000 ರೂ. ನಗದು ಹಣವನ್ನು ದೋಚಿದ್ದರು. ನಂತರ ಕೀ ಪಡೆದುಕೊಂಡು ಮನೆಯ ವರಾಂಡದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದರು.
ಮೆಂಡೊನ್ಸಾ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕ್ಷಿಪ್ರ ತನಿಖೆ ಕೈಗೊಂಡ ಪೊಲೀಸರು, ಮಾಹಿತಿ ಆಧಾರದ ಮೇಲೆ ಹಾಸನದ ಪೊಲೀಸರ ನೆರವಿನೊಂದಿಗೆ ಸಕಲೇಶಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, “ಮಹಜರು ಮಾಡುತ್ತಿದ್ದ ವೇಳೆ ಆರೋಪಿಗಳು ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಆದರೂ ಪರಾರಿಯಾಗುತ್ತಿದ್ದರು. ಆಗ ಆರೋಪಿಗಳ ಕಾಲಿಗೆ ಶೂಟ್ ಮಾಡಿ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.