ಶಿವಮೊಗ್ಗ : ತಾಯಿಯ ನಂತರ ಶಿಕ್ಷಕನಿಗೆ ದೇವರ ಸ್ಥಾನವನ್ನು ನೀಡಲಾಗುತ್ತದೆ. ಆದರೆ ಇಲ್ಲೊಬ್ಬ ಪಾಪಿ ಶಿಕ್ಷಕರ ವೃತ್ತಿಗೆ ಮಸಿ ಬಡಿದಿದ್ದಾನೆ. ವಿದ್ಯಾರ್ಥಿಗಳ ಮೇಲೆ ತನ್ನ ಕಾಮುಕ ಕಣ್ಣು ಹಾಕಿ ಅಸಭ್ಯ ವರ್ತನೆ ತೋರಿದ್ದಾನೆ. ಈ ನಾಚಿಕೆಗೇಡಿನ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ನಡೆದಿದೆ.
ಇಮ್ತಿಯಾಜ್ ಹೆಸರಿನ ಸಂಗೀತ ಶಿಕ್ಷಕನ ಮೇಲೆ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿರುವುದಾಗಿ ಶಿಕ್ಷಕ ಇಮ್ತಿಯಾಜ್ ಮೇಲೆ ಆರೋಪ ಮಾಡಲಾಗಿದೆ. ಹೀಗಾಗಿ ಸರ್ಕಾರಿ ವಸತಿ ಶಾಲೆಯ ಈ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಲಾಗಿದ್ದು ಶಿಕ್ಷಕನ್ನನ್ನು ಬಂಧಿಸಲಾಗಿದೆ.
ಈ ಶಿಕ್ಷಕ ಶಾಲೆಯಲ್ಲಿ ಹಾಗೂ ಪ್ರವಾಸಕ್ಕೆ ತೆರಳಿದ್ದ ವೇಳೆ ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರಿದ್ದಾರೆಂದು ಆರೋಪಿಸಿ, ವಸತಿ ಶಾಲೆಯ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ವಸತಿಶಾಲೆಯ ಪ್ರಾಂಶುಪಾಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ದೂರು ನೀಡಿದ್ದ ಹಿನ್ನೆಲೆ ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ತೀರ್ಥಹಳ್ಳಿ ಪೊಲೀಸರು ಠಾಣೆಯಲ್ಲಿ ಶಿಕ್ಷಕನ ಮೇಲೆ ಪೋಕ್ಸೊ ಕೇಸ್ ದಾಖಲಿಸಿದ್ದಾರೆ.