ಬೆಳಗಾವಿ: ನಕಲಿ ಇನ್ವೈಸ್ ಸೃಷ್ಟಿಸಿ 132 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ತೆರಿಗೆ ಸಲಹೆಗಾರನನ್ನು ಬೆಳಗಾವಿಯಲ್ಲಿ ಜಿಎಸ್ಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ತೆರಿಗೆ ಸಲಹೆಗಾರ ನಕೀಬ್ ನಜೀಬ್ ಮುಲ್ಲಾ ಬಂಧಿತ ಆರೋಪಿ. ವಿವಿಧ ಕಂಪನಿಗಳ ತೆರಿಗೆ ಸಲಹೆಗಾರನಾಗಿದ್ದ ಈತ ನಕಲಿ ಬಿಲ್ ತಯಾರಿಸಿ ಸರ್ಕಾರದ ಬೊಕ್ಕಸ ಸೇರಬೇಕಿದ್ದ ಕೋಟ್ಯಂತರ ರೂ. ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಫೆಡರಲ್ ಲಾಜಿಸ್ಟಿಕ್ಸ್ ಎಂಬ ನಕಲಿ ಕಂಪನಿಯನ್ನು ಸ್ಥಾಪಿಸಿದ್ದ ನಕೀಬ್ ಮುಲ್ಲಾನನ್ನು ಸಿಜಿಎಸ್ಟಿ ಕಾಯ್ದೆ, 2017ರ ಸೆಕ್ಷನ್ 69ರ ನಿಬಂಧನೆಗಳಡಿಯಲ್ಲಿ ಬುಧವಾರ 3 132(1) (2) 2 132 (1)(2) CGST ಕಾಯಿದೆ, 2017ರ ಅಡಿಯಲ್ಲಿ ಅಪರಾಧ ಎಸಗಿದ್ದರಿಂದ ಬಂಧಿಸಲಾಗಿದೆ. ಬಳಿಕ ಬೆಳಗಾವಿಯ ಜೆಎಂಎಫ್ಸಿ 2ನೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ ಎಂದು ಸೆಂಟ್ರಲ್ ಜಿಎಸ್ಟಿ ಮತ್ತು ಎಕ್ಸೈಸ್ ಪ್ರಧಾನ ಆಯುಕ್ತ ದಿನೇಶ ಪಂಗಾರ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.