ಅಂಕಣ || ಕದನದೊಳ್ ಕನ್ನಡಿಗರನ್ನ ಕೆಣಕಿ ಉಳಿದವರಿಲ್ಲ

~ ಲಿಖಿತ್ ಹೊನ್ನಾಪುರ , ಮಾಗಡಿ ತಾಲೂಕು , ರಾಮನಗರ ಜಿಲ್ಲೆ

ನನ್ನ ಮಾತಿದು ಇದೊಂದು ಸಾಲು ಸಾಕು ಕನ್ನಡಿಗನೊಬ್ಬನ ಬದುಕಿನಲ್ಲಿ ಕನ್ನಡವೆಂದರೆ ಏನು  ಎನ್ನಲು.

ಕನ್ನಡ ಬರಿ ಸಂಪರ್ಕ ಸಾಧನ ಮಾತ್ರವಲ್ಲ. ಅದೊಂದು ಮನೋ ಧರ್ಮವನ್ನು ಸಾರುವ ಪ್ರತಿನಿಧಿಯೂ ಹೌದು. ಹಾಗಾಗಿಯೋ ಏನೋ ಓಹೋ ! ಕನ್ನಡದವರು ಸಜ್ಜನರು, ಮೃದುಹೃದಯಿಗಳು ಎನ್ನುವ ಮಾತುಗಳನ್ನು ಹೊರನಾಡಿನಲ್ಲಿದ್ದು ಆಗಾಗ ಕೇಳಿದ್ದುಂಟು. ಭಾಷೆಯೆನ್ನುವುದು ಒಂದಿಡೀ ಸಮೂಹದ ಜನರ ಸಂಸ್ಕಾರ, ಆಚಾರ-ವಿಚಾರಗಳನ್ನು ತೋರುವ ಹಣತೆ. ಜನಮಾನಸ ಬದುಕಿದ ರೀತಿಯನ್ನು, ಗತಿಯನ್ನು ನಿರ್ಧರಿಸುವ ಮಾನದಂಡ. ಇದಕ್ಕೆ ಕನ್ನಡವೂ ಹೊರತಲ್ಲ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ತನ್ನ ಪ್ರಾಚೀನತೆಯಿಂದ ಮಾತ್ರವಲ್ಲ ನಡೆದು ಬಂದ ಭವ್ಯ ಪರಂಪರೆಯಿಂದಲೂ ಪುಟಕ್ಕಿಟ್ಟ ಚಿನ್ನದಂಥ ಮೆರಗುಳ್ಳದ್ದು.

ಕನ್ನಡದ ಚಾಮರದ ನೆರಳಲ್ಲಿ ಬೆಳೆದ ರಾಜ ಮನೆತನಗಳ ಭವ್ಯ ಇತಿಹಾಸ, ಸಾಧಿಸಿದ ಮೇಲ್ಪಂಕ್ತಿ ಸಾಮಾನ್ಯವಾದುದೇನಲ್ಲ. ಆ ಕಾಲದಿಂದ ಇಲ್ಲಿಯವರೆಗೆ ರಚನೆಗೊಂಡ ಸಾಹಿತ್ಯ, ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸಿದ ಮಹಾನ್ ವ್ಯಕ್ತಿತ್ವಗಳು ಕನ್ನಡಿಗರನ್ನು ಯಾವತ್ತು ಹೆಮ್ಮೆಯಿಂದ ತಲೆಯೆತ್ತಿರುವಂತೆಯೇ ನೋಡಿಕೊಳ್ಳುತ್ತವ.  ಭಾಷೆಯ ಹುಟ್ಟು, ಬೆಳವಣಿಗೆಗಳನ್ನು ದಾಖಲಿಸುವ ವಿಷಯಕ್ಕೆ ಬಂದರಂತೂ ಕನ್ನಡ ಮೇರು ಪರ್ವತವಾಗಿಯೇ ಕಂಗೊಳಿಸುತ್ತದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿಗೆ ಮಾತ್ರ ಕನ್ನಡದ ಹಿರಿಮೆ ನಿಲ್ಲುವುದಿಲ್ಲ.

ಕನ್ನಡ ಸಾಹಿತ್ಯ ಪರಂಪರೆ ಸಾಮಾಜಿಕ ಪಲ್ಲಟಗಳಿಗೆ ತೆರೆದುಕೊಂಡ ಬಗೆಯೇ ಅನನ್ಯ. ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ವಚನ ಸಾಹಿತ್ಯವೇ ಆಗಿರಲಿ, ಇಹಪರ ಎರಡಕ್ಕೂ ಮನಸುಗಳನ್ನು ಹದಗೊಳಿಸುವ ದಾಸಸಾಹಿತ್ಯವೇ ಆಗಿರಲಿ ಕನ್ನಡವನ್ನು ಅವುಗಳು ಶಾಶ್ವತಗೊಳಿಸಿದ ರೀತಿಯೇ ಅತ್ಯದ್ಭುತ. ಅದರಲ್ಲಿಯೂ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರಂತೂ ಸಂಗೀತ ಮತ್ತು ಭಾಷೆಯ ಐಕ್ಯವನ್ನು ಸಾಧಿಸುತ್ತಾ ಕನ್ನಡವನ್ನು ಭಗವಂತನ ಕಡೆಗಿನ ಸನ್ಮಾರ್ಗವನ್ನಾಗಿಸಿದ್ದಾರೆ.

ಇತ್ತೀಚಿನ ಭಾವಗೀತೆಗಳು ಜಗತ್ತು ಕನ್ನಡದೆಡೆಗೆ ತಿರುಗಿನೋಡುವಂತೆ ತಮ್ಮದೇ ವೈಶಿಷ್ಟ್ಯವನ್ನು ಮೆರೆಯುತ್ತಿವೆ. ತಮ್ಮ ಚಾಟಿ ಏಟಿನಂತ ಮಾತುಗಳಿಂದ ಜನಸಾಮಾನ್ಯರೂ ಗಹನವಾಗಿ ಚಿಂತಿಸುವಂತೆ ಮಾಡಿದ ಶಿಶುನಾಳ ಶರೀಫರ ಕನ್ನಡ ಅಕ್ಷರಲೋಕ ಇನ್ನೊಂದು ಬಗೆಯಲ್ಲಿ ಕನ್ನಡದ ಘನತೆಯನ್ನು ಎತ್ತಿ ಹಿಡಿದಿದೆ. ನುಡಿದಂತೆ ಬರೆಯಲು ಸಾಧ್ಯವಾಗುವುದು ಸಹ ಕನ್ನಡ ಭಾಷಾ ಲಿಪಿಯ ಒಂದು ಹಿರಿಮೆ. ಭಾಷಾ ವೈಶಿಷ್ಟ್ಯಕ್ಕೆ, ಶ್ರೀಮಂತಿಕೆಯ ವಿಷಯಕ್ಕೆ ಬಂದರೆ ಕನ್ನಡ ಪದಗಳ ಲಭ್ಯತೆಯೆನ್ನುವುದು ಕನ್ನಡದ ಕ್ರಿಯಾಶೀಲ ಮನಸ್ಸುಗಳು ಯಾವುದೇ ಎಲ್ಲೆಯನ್ನು ಮೆಟ್ಟಿ ನಿಲ್ಲಬಲ್ಲ ಅಗಾಧ ಸಮುದ್ರ.

ಕೊಡುವ ವಿಷಯದಲ್ಲೂ, ತೆಗೆದುಕೊಳ್ಳುವುದರಲ್ಲಿಯೂ ಕನ್ನಡಿಗರ ಮನಸ್ಥಿತಿಯಂತೆಯೇ ಕನ್ನಡದ್ದು ಧಾರಾಳ ಮನೋಧರ್ಮ. ಹಾಗಾಗಿ ಕನ್ನಡವು ಅನೇಕ ಮಜಲುಗಳಲ್ಲಿ ಸಶಕ್ತವಾಗಿಯೇ ಬೆಳೆದು ಬಂದಿದೆ. ನಾಗರೀಕತೆ ಬೆಳೆದಂತೆಲ್ಲಾ ಭಾಷೆಯು ತನ್ನ ಮಗ್ಗಲುಗಳನ್ನು ಬದಲಾಯಿಸುತ್ತಲೇ ಬಂದಿದೆ. ಆಂಗಿಕ ಸಂಜ್ಞೆಗಳು ಸಂವಹನ ಮಾಧ್ಯಮವಾಗಿದ್ದ ಕಾಲಘಟ್ಟದಿಂದ ಹಿಡಿದು ಅಕ್ಷರಗಳಲ್ಲಿ ಭಾಷೆ ಸೆರೆಯಾಗುವವರೆಗೂ ಭಾಷೆ ಅನೇಕ ಮಜಲುಗಳನ್ನು ಹಾದು ಬಂದಿರುತ್ತದೆ. ಕನ್ನಡವೂ ಇದಕ್ಕೆ ಹೊರತಲ್ಲ. ಪೂರ್ವದ ಹಳೆಗನ್ನಡ ,ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಹೀಗೆ ಎಲ್ಲಾ ಹಂತಗಳಲ್ಲಿ ಸಶಕ್ತವಾಗಿ ಸಮಾಜದ ಚಿತ್ರಣಗಳನ್ನು ಸೆರೆ ಹಿಡಿಯುತ್ತಾ ಬಂದಿದೆ. ಕೊಡುತ್ತಾ ಪಡೆಯುತ್ತಾ, ಸರಳಗೊಳ್ಳುತ್ತಾ ಸುಮಧುರ ಭಾಷೆಯಾಗಿ, ಪರಿಪಕ್ವವಾಗಿ ರೂಪಗೊಂಡಿದೆ ಕನ್ನಡ.

ಕುಮಾರವ್ಯಾಸನು ಹಾಡಿದ ಹಾಗೆ…. ಎಂದರೆ ಭಾರತವನ್ನೇ ಕಣ್ಣಿಗೆ ಕಟ್ಟಿಕೊಡುವ ಸಾಮರ್ಥ್ಯ ಇಲ್ಲಿ ಕುಮಾರ ವ್ಯಾಸನದ್ದು ಮಾತ್ರವಲ್ಲ, ಕನ್ನಡದ ಭಾಷೆಯ ತಾಕತ್ತಿನದು ಕೂಡ ಹೌದು. ಅವರವರ ಮನೋಧರ್ಮಗಳಿಗೆ ತಕ್ಕಂತೆ ಒದಗುವ ಕನ್ನಡ ಭಾಷಾ ಪದ ಸಂಪತ್ತಿನ ಸವಿ ಉಂಡವರೇ ಬಲ್ಲರು. ಪಂಪ, ರನ್ನರಿಂದ ಕಾರಂತ, ಕುವೆಂಪು, ಬೇಂದ್ರೆ ಇತ್ತೀಚೆಗಿನ ಕನ್ನಡದ ಸಾಹಿತ್ಯ ಲೋಕದ ಮಹನೀಯರವರೆಗೂ ಕನ್ನಡವನ್ನು ಮಣಿಸಿಕೊಂಡ ರೀತಿ, ಭಾಷೆಯ ಸೊಬಗು ಕನ್ನಡಿಗರಿಗೆ ಹೆಮ್ಮೆ ತರುವಂತಹದ್ದು. ಹದಿನೈದು ಇಪ್ಪತ್ತು ಮೈಲುಗಳಿಗೆಂಬಂತೆ ಹೊಸ ಹೊಸ ರೂಪಗಳಲ್ಲಿ ಎದುರುಗೊಳ್ಳುವ ಕನ್ನಡ ಪ್ರಾದೇಶಿಕತೆಯ ಘಮ ಮತ್ತೇರಿಸುವಂತ್ತದ್ದು. ಬಯಲು ಸೀಮೆಯ ಗಡಸುತನದ್ದಿರಬಹುದು, ಕುಂದಾಪುರದ ಕುಂದ ಕನ್ನಡವೇ ಇರಬಹುದು, ಹವ್ಯಕ ಕನ್ನಡವೇ ಇರಬಹುದು ಅಲ್ಲೆಲ್ಲ ರಿಂಗಣಿಸುವುದು ಕನ್ನಡದ ಸುಮಧುರ ಲಾಲಿತ್ಯ ಮಾತ್ರ.

ಹೆಚ್ಚೇನು ಪ್ರಚಲಿತ ಲಿಪಿಗಳಿಲ್ಲದ ಕೊಂಕಣಿ, ತುಳು, ಕೊಡವ, ಬ್ಯಾರಿ ಮುಂತಾದ ಭಾಷಿಗರನ್ನು ತನ್ನ ಮಡಿಲಲ್ಲಿಟ್ಟು ಬೆಳೆಸುತ್ತಾ ಬಂದಿರುವ ಕನ್ನಡ ತಾಯಿಯ ಹೃದಯ ವೈಶಾಲ್ಯಕ್ಕೆ ಸಾಟಿಯೆಂಬುದಿಲ್ಲ. ಅವರುಗಳು ಸಹ ಅಷ್ಟೇ ಪ್ರೀತಿಯಿಂದ ಕನ್ನಡ ತಾಯಿಯ ಸೇವಾ ಕೈಕಂರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ, ಇತ್ತಿತ್ತಲಾಗಿ ಕೊಂಚ ದಿಗಿಲಾಗುವುದು ಸಹಜ. ಮಾಯಾಜಿಂಕೆಯಂತೆ ಆವರಿಸಿಕೊಳ್ಳುತ್ತಿರುವ ಆಂಗ್ಲಭಾಷಾ ವ್ಯಾಮೋಹ, ಕರ್ನಾಟಕದಲ್ಲಾಗುತ್ತಿರುವ ಅನ್ಯಭಾಷಿಗರ ವಲಸೆ, ಗಣಕ ಯಂತ್ರಗಳ ಅತಿಬಳಕೆಯಿಂದಾಗಿ ಕನ್ನಡಕ್ಕೆ, ಕನ್ನಡತನಕ್ಕೆ ಧಕ್ಕೆ ಆಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾದ ಕಾಲದ ಹೊಸ್ತಿಲಲ್ಲಿ ನಾವಿಂದು ನಿಂತಿದ್ದೇವೆ. ಕನ್ನಡ ಮಾತನಾಡುವುದು ಕೂಡ ‘ಫ್ಯಾಶನ್’ ಆಗಬೇಕಾದ ಕಾಲದ ಅನಿವಾರ್ಯತೆಗೆ ನಾವೆಲ್ಲಾ ಬರಲೇ ಬೇಕಿದೆ. ಆ ತೆರದಲ್ಲಿಯಾದರೂ ಕನ್ನಡದ ಮಾತಿನ ಇಂಪು ಪದೇ ಪದೇ ಕಿವಿಗಳ ಮೇಲೆ ಬೀಳಬಹುದು.

ಬಳಸಿದಂತೆಲ್ಲಾ ಉಳಿಯುವ, ಬೆಳೆಯುತ್ತಾ ಸಾಗುವ ನಮ್ಮ ಆಸ್ತಿಯೆಂದರೆ ಅದು ನಮ್ಮ ಭಾಷೆ. ಹಾಗಾಗಿ ನಮ್ಮ ತಾಯ್ಡುಡಿ ಕನ್ನಡವನ್ನು ಹೆಚ್ಚು ಬಳಕೆಯಲ್ಲಿರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಬರೆದರೆ ಮುತ್ತಿನ ಹಾರದಂತೆ ಕಂಗೊಳಿಸುವ ಕನ್ನಡ ಲಿಪಿಗೆ ಗಣಕ ಯಂತ್ರಗಳ ಸಂಕ್ಷಿಪ್ತ ಭಾಷೆ, ಲಿಪಿಯ ಬಳಕೆಯನ್ನೇ ಧಿಕ್ಕರಿಸುತ್ತಿರುವ ಇಮೂಜಿಗಳಿಂದಲೂ ಉಂಟಾಗುತ್ತಿರುವ ಹಾನಿ ಸಣ್ಣದೇನಲ್ಲ.

ಒಂದಿಡೀ ಸಮುದಾಯದ ಸಂಸ್ಕಾರ, ಸಂಸ್ಕೃತಿಗಳನ್ನು ಪ್ರತಿನಿಧಿಸುವ ಭಾಷೆ ಜನಮಾನಸವನ್ನು ಬೆಸೆಯುವಲ್ಲಿ ಮಹತ್ತರದ ಪಾತ್ರ ವಹಿಸುತ್ತದೆ. ಹಾಗಾಗಿ ನೆಲ,ಜಲದ ವಿಷಯಗಳು ಬಂದಾಗ ಆಯಾ ಭಾಷೆಯ ನೆಲದ ಜನರ ಭಾವನೆಗಳು ತೀವ್ರವಾಗಿರುತ್ತವೆ. ಇಂತಹ ಮನಸುಗಳ ಜೋಡಿಸುವ ಕನ್ನಡದ ಅಂಟಿನೊಳಗೆ ನಮ್ಮ ಮಕ್ಕಳು ಬೆಳೆಯ ಬೇಕಿದೆ. ರಕ್ತಸಂಬಂಧದ ಜೊತೆಗೆ ಬೆಳೆದು ಬರುವ ಭಾಂದವ್ಯ ಭಾಷೆಯದು. ಆದುದರಿಂದಲೇ ಕನ್ನಡವೆಂದರೆ ಕುಣಿದಾಡುವುದೆಮ್ಮೆದೆ, ಕನ್ನಡಕ್ಕಾಗಿ ಕಿವಿ ನಿಮಿರುವುದು, ಕನ್ನಡಕ್ಕಾಗಿಯೇ ಮೈ ಮರೆಯುವುದು ಎಂಬ ಕವಿವಾಣಿ ಕನ್ನಡತನವನ್ನು ಸಾರುತ್ತದೆ.

ಆದರೂ ಕನ್ನಡಿಗರ ಭಾಷಾಮೋಹದ ವಿಷಯಕ್ಕೆ ಬಂದರೆ ಮಲೆಯಾಳಿಗಳ ಮಡಿವಂತಿಕೆ, ತಮಿಳರ ಜಿಗುಟುತನ ನಮಗೂ ಬೇಕು ಅನ್ನಿಸುತ್ತದೆ. ವಿಶಾಲ ಕರುನಾಡು ಕಲೆ, ಸಾಹಿತ್ಯ, ನಾಟಕ, ನೃತ್ಯ, ಸಂಗೀತ, ಚಲನಚಿತ್ರ ಮಾಧ್ಯಮ, ಜನಪದ ಜಗತ್ತು, ಯಕ್ಷಗಾನ ಹೀಗೆ ಯಾವುದೇ ರಂಗದಲ್ಲೂ ತನ್ನದೇ ಛಾಪನ್ನು ಮೂಡಿಸುವಷ್ಟು ಸಶಕ್ತವಾಗಿದೆ. ಅದನ್ನು ಉಳಿಸಿಕೊಂಡು ಬೆಳಸಿಕೊಳ್ಳುವ ಕೆಲಸ ಈ ನೆಲದ ಮಕ್ಕಳಿಂದ ಆಗ ಬೇಕಿದೆ. ದೊಡ್ಡ, ದೊಡ್ಡ ಉತ್ಸವಗಳಿಗಿಂತ ಸಾಧ್ಯವಿರುವೆಡೆಯಲೆಲ್ಲಾ ಕನ್ನಡವನ್ನು ಹೆಮ್ಮೆಯಿಂದ ಉಪಯೋಗಿಸುವುದು ಇಂದಿನ ಅನಿವಾರ್ಯತೆ. ನಮ್ಮ ಮಕ್ಕಳು ಕನ್ನಡದಲ್ಲಿಯೇ ಕನಸುಗಳನ್ನು ಕಾಣಲಿ. ಕನ್ನಡ ಭಾಷೆ ಅನ್ನದ ಮಾರ್ಗವೂ ಆಗಲಿ. ಲಾಭ -ನಷ್ಟಗಳ ಲೆಕ್ಕಾಚಾರಗಳನ್ನು ಮೀರಿ ಕನ್ನಡ ಭಾಷೆಯನ್ನು ಪ್ರೀತಿಸೋಣ.

ನಮ್ಮ ನಾಡು ಕನ್ನಡ ನಮ್ಮ ಭಾಷೆ ಕನ್ನಡ ಕನ್ನಡಿಗರೆಲ್ಲ ವಿನಯವಂತರು ಎಲ್ಲವನ್ನೂ ಸಹಿಸುವಂತರಾಗಿರುವರೆಂದರೆ ತಪ್ಪಾಗಲಾರದೇನೋ. ನಾನಾ ರಾಜ್ಯಗಳಿಂದ ಬೇರೆ ಬೇರೆ ಭಾಷೆ ಗಳನ್ನು ಆಡುವವರು ಬೆಂಗಳೂರಿಗೆ ಬರುತ್ತಿದ್ದಾರೆ. ಪ್ರತಿದಿನ ಸಾವಿರ ಜನರಾದರು ಬರುವರೇನೊ ಅವರೆಲ್ಲರಿಗೆ ನಮ್ಮ ಭಾಷೆ ಕಲಿಸುವುದು ಬಿಟ್ಟು ಅವರಾಡುವ ಭಾಷೆ ನಮ್ಮಗೆ ಗೊತ್ತು ಎಂದು ಅರ್ಧಮರ್ಧ ಬಂದರೂ ಅವರ ಭಾಷೆಯಲ್ಲಿ ಯೇ ವ್ಯವಹರಿಸುತ್ತಿರುವೆವು. ಇಲ್ಲವೆಂದರೆ ಇಂಗ್ಲಿಷ್ ಭಾಷೆ ಯಲ್ಲಿ ಮೇಧಾವಿಗಳಂತೆ ಮಾತನಾಡುತ್ತೆ ನಮ್ಮ ಸ್ವಂತಿಕೆಯ ನ್ನು ಮರೆತು ಇಂಗ್ಲಿಷ್ ಭಾಷೆ ಯ ಗುಲಾಮರಂತೆ ವರ್ತಿಸುತ್ತಿರುವ ನಮ್ಮಗೆ ನಮ್ಮ ಭಾಷೆ ನೆಲ ಜಲದ ಮೇಲೆ ಪ್ರೀತಿ ಮಮತೆ ಇರುವುದು ನಿಜವೇನಾ?ಎಂಬ ಸಂದೇಹ ಮೂಡುವುದು

ನವೆಂಬರ್ ತಿಂಗಳ ಬಂತೆಂದರೆ ಕನ್ನಡ ಕನ್ನಡ ಎಂದು ಬೊಬ್ಬಿಡುವ ನಾವುಗಳು ಪ್ರತಿಯೊಂದು ತಿಂಗಳು, ವರುಷ, ನಮ್ಮ ಸಾಹಿತ್ಯ ನಮ್ಮ ಭಾಷೆಯಲ್ಲಿಯೇ ಆದಷ್ಟು ವ್ಯವಹರಿಸುವುದು ಕಲಿತರೆ ನವೆಂಬರ್ನಲ್ಲಿ ಅಷ್ಟೇ ಕನ್ನಡ ಕನ್ನಡ ಎಂಬ ಕೂಗಿನ ಸದ್ದ ಅಡಗಿ ಕನ್ನಡ ದ ಕಂಪು ಎಲ್ಲರ ಮನೆ ಮನೆಗಳಲ್ಲಿ ಘಮಘಮಿಸುವುದು. ಕನ್ನಡ ಸಾಹಿತ್ಯ ಅಗಾಧವಾದ ಪರಿಧಿಯನ್ನು ಹೊಂದಿದೆ. ನಮ್ಮ ಆಡು ಭಾಷೆಯಲ್ಲಿ ಓದುವ ಹವ್ಯಾಸ ಬೆಳೆಯಿಸಿಕೊಂಡರೆ ನಮ್ಮ ಸಾಹಿತ್ಯ ಉಳಿಸಿಕೊಂಡು ಬೆಳೆಯಿಸಿಕೊಂಡು ಬರಬಹುದು . ಕನ್ನಡ ನಾಡಿಗೆ ಅದರದೆ ಯಾದ ಚರಿತೆ ಇತಿಹಾಸ ವಿದೆ ಹಿಂದಿನಸಕಾಲದಲ್ಲಿ ರಾಜ ಮಹಾರಾಜರು ಒಳೊಳ್ಳೆಯ ಕೊಡುಗೆಗಳನ್ನು ನೀಡಿದ್ದಾರೆ. ಅನೇಕ ಕವಿಗಳು ಕನ್ನಡ ನಾಡನ್ನು ತಮ್ಮ ಕವಿತೆಗಳಲ್ಲಿ ಹಾಡಿ ಹೊಗಳಿದ್ದಾರೆ ನಮ್ಮ ನಾಡಿನ ಐಶ್ವರ್ಯ ವನು ಎತ್ತಿ ತೊರಿದ್ದಾರೆ. ಕನ್ನಡ ನಾಡು ಗಂಧದ ಬೀಡು ಎಂಬ ಪ್ರತೀತಿಯಿದೆ. ಆ ಗಂಧವನ್ನು ಕನ್ನಡ ದ ವಿದ್ವಾಂಸರು ಜಗತ್ತಿಗೆ ಸಾರಿದ್ದಾರೆ. ಬಸವಣ್ಣನವರ ವಚನಗಳು ವಿದೇಶದಲ್ಲು ಓದುವವರಿದ್ದಾರೆ. ವಚನಗಳು ದಾಸ ಸಾಹಿತ್ಯ ಕುಮಾರವ್ಯಾಸ ಪಂಪ ರನ್ನ ಪೊನ್ನ ಮಹಾಕವಿಗಳನ್ನು ಕಂಡ ನಾಡು ನಮ್ಮದು. ನಾವಿಂದು ನಮ್ಮ ಮಕ್ಕಳಿಗೂ ಕನ್ನಡದ ಗಂಧ ಗಾಳಿ ಬಡಿಯದಂತೆ ಮಾಡಿದ್ದೆವೆಯೆದೆ ಹೇಳಬಹುದು. ಕನ್ನಡ ಶಾಲೆಗಳಿಗೆ ಮಕ್ಕಳನ್ನು ನಾವು ಕಳಿಸುವುದಿಲ್ಲ ಮನೆಯಲ್ಲಿ ಯೂ ಕನ್ನಡ ಮಾತನಾಡುವುದಿಲ್ಲ ಕನ್ನಡ ಮಹನೀಯರ ಪರಿಚಯವು ಆಗುವುದಿಲ್ಲ ಮನೆಯಲ್ಲಿ ಯಾದರೂ ಮಕ್ಕಳೊಂದಿಗೆ ಕನ್ನಡ ದಲ್ಲಿ ಮಾತನಾಡಬಹುದು ಇಲ್ಲ ಮಗುಗೇ ಇಂಗ್ಲಿಷ್ ಬರಬೇಕು ಎಂದು ಅನ್ಯ ಭಾಷೆಯ ಗುಲಾಮರಾಗುತ್ತಾ ಹೊಗುತ್ತಿರುವುದರಿಂದ ಕನ್ನಡ ಕಮರಿಹೊಗುವುದೇನೊ ಎನ್ನಿಸುತ್ತದೆ.

ಎಲ್ಲಾದರು ಇರು ಎಂತಾದರು ಇರು ಕನ್ನಡ ತನ ಮೆರೆಯುತ್ತಿರು ಓ ಮುದ್ದಿನ ಕರು ಎಂಬ ಕವಿತೆ ಯಂತೆ ನಾವು ನಮ್ಮತನವನು ಉಳಿಸಿಕೊಂಡು ಬೆರೆಯವರ ಸಂಸ್ಕೃತಿ ತಿಳಿದುಕೊಳ್ಳುವುದು ಉತ್ತಮ ವೆನ್ನಿಸುವುದು. ಹೆಸರಿಗಷ್ಟೇ ನನ್ನ ಮನೆಯ ಆಡು ಭಾಷೆ ಕನ್ನಡ ನಾನು ಕನ್ನಡಿಗ ಎಂದು ಹೇಳುವುದು ಕನ್ನಡದಲ್ಲಿ ಎಷ್ಟು ಜ್ಞಾನ ಪೀಠ ಪ್ರಶಸ್ತಿ ಬಂದಿವೆ ಯಾರಾರಿಗೆ ಬಂದಿವೆ ಹೇಳಿ ಎಂದರೆ ಸರಿಯಾಗಿ ಹೆಸರು ಹೇಳಲು ಬಾರದ ನಾವು ವ್ಯವಹರಿಸಲು ಇಂಗ್ಲಿಷ್ ಭಾಷೆ ಬಳಸಿಕೊಂಡರೂ ಮನೆಯಲ್ಲಿ ಸ್ನೇಹಿತರೊಂದಿಗೆ ಮಕ್ಕಳೊಂದಿಗೆ ನಮ್ಮ ಕನ್ನಡ ನಾಡು ನುಡಿಯ ಬಗ್ಗೆ ಚರ್ಚಿಸುತ್ತ ಅಅವುಗಳ ಮಹತ್ವ ವನ್ನು ತಿಳಿದುಕೊಳ್ಳುತ್ತಾ ನಡೆದರೆ ನಮ್ಮ ತಾಯಿ ಗೆ ನಾವು ಸಲ್ಲಿಸಿದ ಗೌರವ ವಾಗುವುದು. ನಮ್ಮ ರಾಜ್ಯದಲ್ಲಿ ವಲಸಿಗರ ಸಂಖ್ಯೆ ಯು ಬಹಳವಿದೆ . ಅಂಥವರಿಗೆ ನಾವು ನಮ್ಮ ನಾಡಿನ ಬಗ್ಗೆ ತಿಳಿಸಿಹೇಳಿ ನಮ್ಮ ನೆಲದಲ್ಲಿ ಅವರು ನೆಲೆಸಿರುವುದರಿಂದ ವಲಸಿಗರಿಗೇ ನಮ್ಮ ನೆಲ ಜಲ ನಾಡು ಭಾಷೆಯ ಮೇಲೆ ಪ್ರೀತಿ ಹುಟ್ಟುವಂತೆ ನಾವು ಕೆಲಸ ಮಾಡಬೇಕು ಅವರೊಂದಿಗೆ ಗೆಳೆತನ ಬೆಳೆಯಿಸಿ ಬೇಡವೆಂದಲ್ಲ ನಮ್ಮ ಕನ್ನಡ ದ ಕಸ್ತೂರಿಯ ಪರಿಮಳ ಅವರೆಲ್ಲ ಅಗ್ರಾಣಿಸುವಂತೆ ಮಾಡಿದರೆ ಇಂದಿರುವ ಕನ್ನಡ ದ ಸ್ಥಿತಿ ಬದಲಾಗುವುದೇನೊ…

ನಮ್ಮ ಹೆತ್ತ ತಾಯಿ ಕನ್ನಡ ಮ್ಮ ಅವಳಿಗೆ ಅನ್ಯಾಯ ವಾಗದಂತೆ ನೊಡಿಕೊಳ್ಳಬೇಕಾದು ನಮ್ಮ ಆದ್ಯ ಕರ್ತವ್ಯ.

ಯಾರೇ ಆಗಲಿ ತಮ್ಮ ಮಾತ್ರುಭಾಷೆಯಲ್ಲಿ ಓದಲು ಬರೆಯಲು ಕಲಿತರೆ ಮಾತನಾಡುತ್ತಿದರೆ ಆತ್ಮೀಯ ತೆ ಬೆಳೆಯುತ್ತದೆ ಹೃದಯಕ್ಕೆ ಹತ್ತಿರದವರು ಎನ್ನಿಸುತ್ತದೆ. ಅಷ್ಟೇ ಏಕೆ ಬೈಯುವುದನ್ನೇ ಇಂಗ್ಲಿಷ್ ನಲ್ಲಿ ಬೈಯ್ದರೇ ಅಷ್ಟಾಗಿ ಬೈಯಿಸಿಕೊಂಡವನಿಗೆ ನೊವಾಗುವುದಿಲ್ಲ ಅದೇ ಕನ್ನಡ ದಲ್ಲಿ ಬೈಯ್ದರೇ ಕತೆನೇ ಬರೆಯಾಗಿರುತ್ತದೆ. ನವಂಬರ ಬಂತೆಂದು ಕನ್ನಡ ಕನ್ನಡ ಎಂದು ಕನ್ನಡ ದ ಕಹಳೆ ಎಲ್ಲಡೆಗೆ ಮೋಳಗಿಸದೆ ಕನ್ನಡ ವನು ನಮ್ಮ ಉಸಿರಿನಂತೆ ಪ್ರೀತಿಸುತ್ತಿದರೆ ಈ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತ ವಾಗಿರುವುದಿಲ್ಲ. ಹಬ್ಬದ ದಿನವಷ್ಟೇ ದೆವಸ್ಥಾನಕ್ಕೆ ಹೊಗದೆ ಪ್ರತಿದಿನ ಪ್ರತಿಕ್ಷಣ ದೆವರು ನೆನೆಯುತ್ತಿದರೆ ದೆವಸ್ಥಾನಕ್ಕೆ ಹೊಗುವ ಅಗತ್ಯವೇ ಇರಲಾರದು. ಅದರಂತೆ ಕನ್ನಡ ಭಾಷೆ ಗೆ ನವೆಂಬರ್ ತಿಂಗಳಲ್ಲಿ ಅಷ್ಟೇ ಗೌರವ ತೊರದೇ ..ಕನ್ನಡದಲ್ಲೇ ನಾವು ಉಸಿರಾಡುವಂತಾಗಬೇಕು. ನಮ್ಮ ಅಭಿಪ್ರಾಯಗಳನ್ನು ನಮ್ಮ ಮಾತ್ರುಭಾಷೆಯಲ್ಲಿ ನಿರ್ಭಿಡೆಯಿಂದ ಹೇಳಬಹುದು. ಅದೇ ಇಂಗ್ಲಿಷ್ ನಲ್ಲಿ ಹಾಗೇ ಆಗದು ಒಂದು ಉಚ್ಚಾರ ಒಂದು ಅಕ್ಷರ ತಪ್ಪು ಬರೆದರೇ ಅರ್ಥ್ ವೇ ಬೇರೆಯಾಗುವುದು. ಕರ್ನಾಟಕ ದಲ್ಲಿ ನಮ್ಮ ಸ್ವಂತ ನಾಡಿನಲ್ಲಿ ಕನ್ನಡ ಕ್ಕೆ ಬೆಲೆಯಿಲ್ಲವಾಗಿದೆ ಕನ್ನಡ ಉಳಿಸಿ ಎಂಬ ಫಲಕಗಳನ್ನು ತೂಗು ಹಾಕಿರುತ್ತಾರೆ ಅದು ತೊರಿಕೆಗೆ ಅಷ್ಟೇ ಎಂಬಂತಾಗಿದೆ. ಜನರು ಕನ್ನಡ ವನ್ನು ತಮ್ಮ ತಾಯಿಯೆಂದು ತಿಳಿದು ಅದಕ್ಕೆ ಸಿಗಬೇಕಾದ ಮನ್ನಣೆ ದೊರಕಿಸಿಕೊಟ್ಟರೇ ಮಾತ್ರ ಕನ್ನಡ ಉಳಿಯಲು ಬೆಳೆಯಲು ಸಾಧ್ಯ….

ನೋಟಕ್ಕೆ ಮುತ್ತಿನ ಹಾರವಾಗಿ
ನಾಲಿಗೆಗೆ ಸವಿಜೇನಾಗಿ
ಕಿವಿಗಳಿಗೆ ಆನಂದ ಲಹರಿಯಾಗಿ
ಮನಗಳಿಗೆ ತಂಗಾಳಿಯ ಹಿತವಾಗಿ
ಕಂಗೊಳಿಸುವ ಕನ್ನಡ ನಮ್ಮ
ಉಸಿರಾಗಿರಲಿ, ಹಸಿರಾಗಲಿ,ಹೆಸರಾಗಲಿ,ಚಿರವಾಗಿ,ಸ್ಥಿರವಾಗಿರಲಿ .
ತನು-ಮನ ಕನ್ನಡವಾಗಲಿ, ನಡೆ-ನುಡಿ ಕನ್ನಡವಾಗಲಿ.
ನಿತ್ಯವೊ ಕನ್ನಡದ ಉತ್ಸವಗಳು ನಡೆಯಲಿ.

Leave a Reply

Your email address will not be published. Required fields are marked *