ವಯನಾಡ್ ಭೂಕುಸಿತ : 22 ಮಕ್ಕಳು ಸೇರಿ 243 ಮಂದಿ ಸಾವು

ಕೇರಳ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಕನಿಷ್ಠ 243ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯ ಮುಂದುವರೆದಿದೆ. ಚೂರಲ್ಮಲಾದಲ್ಲಿ ಭಾರತೀಯ ಸೇನೆಯು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದೆ. ಸೇನೆಯ ಎಂಜಿನಿಯರಿಂಗ್ ಘಟಕವಾದ ಮದ್ರಾಸ್ ಇಂಜಿನಿಯರ್ ಗ್ರೂಪ್ (ಎಂಇಜಿ) ಸೇತುವೆ ನಿರ್ಮಾಣ ಮಾಡುತ್ತಿದ್ದು, ಇದು ಪೂರ್ಣಗೊಳ್ಳುವತ್ತ ಸಾಗಿದೆ.

ವಯನಾಡ್‌ನಲ್ಲಿ ಸೋಮವಾರ-ಮಂಗಳವಾರದ ಮಧ್ಯರಾತ್ರಿಯಲ್ಲಿ ಎರಡು ಭಾರಿ ವಿನಾಶಕಾರಿ ಭೂಕುಸಿತಗಳು ಉಂಟಾಗಿವೆ. ನಾಲ್ಕು ಗ್ರಾಮಗಳ ಸಂಪೂರ್ಣವಾಗಿ ನೀರು ಹಾಗೂ ಮಣ್ಣು ಪಾಲಾಗಿವೆ. ನೂರಾರು ಮನೆಗಳು, ಸಂಪರ್ಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಂದು ಬೆಳಗ್ಗೆ ವೇಳೆ, ಒಟ್ಟಾರೆ ಮೃತರ ಸಂಖ್ಯೆ 243ಕ್ಕೆ ತಲುಪಿದೆ. ಇನ್ನೂ 240 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೃತರಲ್ಲಿ 22 ಮಕ್ಕಳು!: ಇದುವರೆಗೆ ಮೃತರಲ್ಲಿ 77 ಪುರುಷರು, 67 ಮಹಿಳೆಯರು ಮತ್ತು 22 ಮಕ್ಕಳು ಸೇರಿದಂತೆ 96 ಸಂತ್ರಸ್ತರನ್ನು ಗುರುತಿಸಲಾಗಿದೆ. 166 ದೇಹಗಳು ಮತ್ತು 49 ದೇಹದ ಭಾಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಟ್ಟು 75 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಜೊತೆಗೆ 200ಕ್ಕೂ ಹೆಚ್ಚು ಜನರು ಸಹ ಗಾಯಗೊಂಡಿದ್ದಾರೆ. ವಿವಿಧ ಆಸ್ಪತ್ರೆಗಳನ್ನು ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೆ 3,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೂ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರಕ್ಕಾಗಿ ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಳಿಸಲಾಗುತ್ತಿದೆ. ಭೂಕುಸಿತ ಪೀಡಿತ ಚೂರಲ್ಮಲಾ ಹಾಗೂ ಮುಂಡಕ್ಕೈ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ

Leave a Reply

Your email address will not be published. Required fields are marked *