ಆಂಧ್ರ ಪ್ರದೇಶ : ವಿಶಾಪಟ್ಟಣಂ ರೈಲು ನಿಲ್ದಾಣದಲ್ಲಿ ಇಂದು ಅಗ್ನಿ ಅವಘಡ ಘಟಿಸಿತು. ನಾಲ್ಕನೇ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಕೊರ್ಬಾ-ವಿಶಾಖಾ ಎಕ್ಸ್ಪ್ರೆಸ್ನ ಮೂರು ಎಸಿ ಕೋಚ್ಗಳು ಬೆಂಕಿಗೆ ಆಹುತಿಯಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಿ-7 ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಬಿ-6 ಮತ್ತು ಎಂ-1 ಬೋಗಿಗಳಿಗೆ ವ್ಯಾಪಿಸಿದೆ. ತಕ್ಷಣ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸಿದರು.
“ಈ ರೈಲು ಬೆಳಗ್ಗೆ 6 ಗಂಟೆಗೆ ಕೊರ್ಬಾದಿಂದ ವಿಶಾಖಾಪಟ್ಟಣ ತಲುಪಿದೆ. ಮಧ್ಯಾಹ್ನ 2 ಗಂಟೆಗೆ ತಿರುಪತಿಗೆ ತೆರಳಬೇಕಾಗಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಜರುಗಿರುವ ಶಂಕೆ ವ್ಯಕ್ತವಾಗಿದೆ” ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
“ಬೆಳಗ್ಗೆ 10 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಎಲ್ಲ ಪ್ರಯಾಣಿಕರು ರೈಲಿನಿಂದ ಕೆಳಗಿಳಿದಿದ್ದರು. ಕೂಡಲೇ ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಾಲ್ಕು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲಾಯಿತು. ಸುಟ್ಟ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಿ ಸ್ಥಳಾಂತರಿಸಲಾಗುತ್ತಿದೆ. ರೈಲ್ವೆ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ” ಎಂದು ವಿಶಾಖಪಟ್ಟಣ ಜಂಟಿ ಸಿಪಿ ಫಕೀರಪ್ಪ ತಿಳಿಸಿದರು.