ಮೈಸೂರು: ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ, ದಿನೇಶ್ ಗುಂಡೂರಾವ್(Dinesh gunduroa) ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತನಾಡಿಸುವುದೇ ತಪ್ಪಾ? ತಿಳಿಗೇಡಿ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಪ್ರತಾಪ್ ಸಿಂಹ(prathap simha) ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ (Mysore) ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂಧಿ(Sonia gandhi), ರಾಹುಲ್ ಗಾಂಧಿ(Rahul gandhi) ಇಬ್ಬರೂ ಆರೋಪಿಗಳು. ಹೀಗಿರುವಾಗ, ಕಾಂಗ್ರೆಸ್ ನಾಯಕರೇಕೆ ಅವರ ಕಾಲಿಗೆ ಬೀಳುತ್ತಾರೆ? ಎಂದು ಪ್ರಶ್ನಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಾವು ಬೆಳಗಾವಿಯಲ್ಲಿ ಈಚೆಗೆ ನಡೆಸಿದ್ದು ಬಿಜೆಪಿ(BJP) ಅತೃಪ್ತರ ಅಥವಾ ಬಂಡಾಯಗಾರರ ಸಭೆಯಲ್ಲ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣವನ್ನು ಖಂಡಿಸಿ ಸೆ.17ರಿಂದ ಪಾದಯಾತ್ರೆಗೆ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯ ಅನುಭವವನ್ನು ನಾನು ಅಲ್ಲಿ ಹಂಚಿಕೊಂಡೆ. ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತದೆ. ಯತ್ನಾಳ್ ಅವರಂಥ ದೊಡ್ಡ ನಾಯಕ ಕರೆದ ಕಾರಣ ನಾನು ಹೋಗಿದ್ದೆ ಎಂದರು. ನಮ್ಮ ಪಾದಯಾತ್ರೆ ನಾಯಕತ್ವ ಪ್ರದರ್ಶನಕ್ಕಲ್ಲ. ಅದಕ್ಕೆ ಹೈಕಮಾಂಡ್ ಅನುಮತಿ ಕೊಡುತ್ತದೆ
ವರಿಷ್ಠರ ಅನುಮತಿಯೊಂದಿಗೇ ನಡೆಸುತ್ತೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು. ಕೇಂದ್ರಕ್ಕೆ ಹೋಗಬೇಡಿ ರಾಜ್ಯದಲ್ಲೇ ಇರಿ ಎಂಬ ಸಂದೇಶ ವರಿಷ್ಠರಿಂದ ಸಿಕ್ಕಿದೆ. ಹೀಗಾಗಿ ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರವೇ ರೆಬಲ್; ಪಕ್ಷದ ವಿರುದ್ಧವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನು ಸೀನಿಯರ್. ಏಕೆಂದರೆ, ನನ್ನಪ್ಪ ಆರ್‌ಎಸ್ಎಸ್‌ನಲ್ಲಿದ್ದರು. ನಾನು ಪಕ್ಷದ ಕಾರ್ಯಕ್ರಮಗಳಲ್ಲಿ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದಿರಬಹುದು. ಆದರೆ, ಯುವಜನರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಸಮರ್ಥಿಸಿಕೊಂಡರು.
ಬಿ.ಎಸ್. ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ಪಕ್ಷಕ್ಕೆ ನನ್ನಂತಹ ಯಂಗ್ ಬ್ಲಡ್ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.