ನವದೆಹಲಿ: ಅತಿಹೆಚ್ಚು ಜನ ಮತ್ತು ವಾಹನ ದಟ್ಟಣೆ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈ ಒತ್ತಡವನ್ನು ತಗ್ಗಿಸಲು ಅಗತ್ಯವಿರುವ ಬಹುನಿರೀಕ್ಷಿತ ಮೂರನೇ ಹಂತದ ಮೆಟ್ರೋ ರೈಲು ಕಾಮಗಾರಿಗೆ ಕೇಂದ್ರದ ನರೇಂದ್ರ ಮೋದಿ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. 31 ನಿಲ್ದಾಣಗಳುಳ್ಳ 44.65 ಕಿಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್ಗಳನ್ನು ಈ ಯೋಜನೆ ಹೊಂದಿದೆ.
15,611 ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದೆ. ಮೂರನೇ ಹಂತದ ಮೆಟ್ರೋ ರೈಲು ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರು ನಗರವು 220.20 ಕಿಮೀ ವ್ಯಾಪ್ತಿಯ ಮೆಟ್ರೋ ಜಾಲವನ್ನು ಹೊಂದಿದಂತಾಗುತ್ತದೆ. ಈ ಯೋಜನೆಯು 44.65 ಕಿಮೀ ಉದ್ದವನ್ನು ಹೊಂದಿದೆ. 2029ರ ವೇಳೆಗೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೂರನೇ ಹಂತದ ಸಂಪರ್ಕ ಜಾಲ: ಆರೆಂಜ್ ಲೈನ್ ಆಗಿರುವ ಮೆಟ್ರೋ ಮೂರನೇ ಹಂತವು ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ರಸ್ತೆ, ಹೊರ ವರ್ತುಲ ರಸ್ತೆಯಲ್ಲಿನ ಐಟಿ ಕೈಗಾರಿಕೆಗಳು, ತುಮಕೂರು ರಸ್ತೆಯಲ್ಲಿನ ಜವಳಿ ಮತ್ತು ಎಂಜಿನಿಯರಿಂಗ್ ವಸ್ತುಗಳ ಉತ್ಪಾದನಾ ಘಟಕಗಳು, ಒಆರ್ಆರ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಕೆಎಲ್ಇ ಕಾಲೇಜು, ದಯಾನಂದಸಾಗರ ವಿಶ್ವವಿದ್ಯಾಲಯ, ಐಟಿಐ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ ಪ್ರಮುಖ ಪ್ರದೇಶಗಳನ್ನು 3ನೇ ಹಂತವು ಜೋಡಿಸುತ್ತದೆ.
ಇದರ ಜೊತೆಗೆ, ನಗರದ ದಕ್ಷಿಣ ಭಾಗದಲ್ಲಿನ ಔಟರ್ ರಿಂಗ್ ರೋಡ್ ವೆಸ್ಟ್, ಮಾಗಡಿ ರಸ್ತೆ ಮತ್ತು ವಿವಿಧ ಸ್ಥಳಗಳಿಗೆ ಸಂಪರ್ಕ ಸಾಧಿಸುತ್ತದೆ. ಒಟ್ಟಾರೆ, ಯೋಜನೆಯು ನಗರದಲ್ಲಿನ ವಾಣಿಜ್ಯ ಕೇಂದ್ರಗಳು, ಕೈಗಾರಿಕಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಮಾರ್ಚ್ನಲ್ಲಿ ಒಪ್ಪಿಗೆ ನೀಡಿತ್ತು. ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯು ಈ ಯೋಜನೆಗೆ ಆರ್ಥಿಕ ಸಹಕಾರ ನೀಡುವ ನಿರೀಕ್ಷೆ ಇದೆ.
ಕಾರಿಡಾರ್ಗಳು ಎಲ್ಲಿಂದ ಎಲ್ಲಿಗೆ ಸಂಪರ್ಕ: 1ನೇ ಕಾರಿಡಾರ್ ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರದವರೆಗೆ (ಪಶ್ಚಿಮ ಹೊರ ವರ್ತುಲ ರಸ್ತೆ ಒಳಗೊಂಡು) ಸಂಪರ್ಕ ನೀಡಲಿದೆ. ಇದು ಒಟ್ಟು 32.15 ಕಿಮೀ ವ್ಯಾಪ್ತಿ ಹೊಂದಿರುತ್ತದೆ. ಈ ಯೋಜನೆಯಲ್ಲಿ 21 ನಿಲ್ದಾಣಗಳು ಇರಲಿವೆ. 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆ ಪ್ರದೇಶವರೆಗೆ (ಮಾಗಡಿ ರೋಡ್ ಸೇರಿ) ಸಂಪರ್ಕ ಕಲ್ಪಿಸಲಿದೆ. ಒಟ್ಟು 12.50 ಕಿಮೀ ವ್ಯಾಪ್ತಿಯಲ್ಲಿ 9 ನಿಲ್ದಾಣಗಳು ಇದರಲ್ಲಿವೆ.