ಪತ್ನಿ ಶವ ಬಾತ್ ರೂಮ್​ನಲ್ಲಿ ಪತ್ತೆ : ಗಂಡನ ಮೇಲೆ ಶಂಕೆ

ಬೆಂಗಳೂರು: ಕುಡಿತದಿಂದ ಲಿವರ್ ಫೇಲ್ಯೂರ್ ಆಗಿ ಗಂಡನ ಆರೋಗ್ಯ ಹದಗೆಟ್ಟಿತ್ತು. ಹೀಗಾದ ಬಳಿಕ ಕೆಲಸ ಬಿಟ್ಟು ಪತಿ ಮನೆ ಸೇರಿದ್ದರಿಂದ ಸಂಸಾರದಲ್ಲಿ ಬಿರುಕು ಮೂಡಿತ್ತು. ಇದರಿಂದ ನೊಂದ ಪತ್ನಿ ಮಕ್ಕಳನ್ನು ಕರೆದೊಯ್ದು ತನ್ನ ತವರು ಸೇರಿದ್ದಳು. ಆದ್ರೆ ಮತ್ತೆ ಗಂಡನ ಮನೆಗೆ ಬಂದಿದ್ದ ಆಕೆ ಬಾತ್ ರೂಮ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ನೆಲಮಂಗಲ ತಾಲೂಕಿನ ದಾಬಸ್​ಪೇಟೆಯಲ್ಲಿ ಈ ದಾರುಣ ಘಟನೆ ನಡೆದಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಫೋನ್ ಕರೆಯನ್ನು ಸ್ವೀಕರಿಸದ ಹಿನ್ನೆಲೆ ಸಂಶಯಗೊಂಡ ತವರು ಮನೆಯವರು ಬಂದು ನೋಡಿದಾಗ ಮಗಳ ಶವ ಬಾತ್ ರೂಮ್​ನಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮೃತಳ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು.

ಪ್ರಕರಣ ಹಿನ್ನೆಲೆ: ಮೃತ ಮಹಿಳೆಯ ಹೆಸರು ಕಾವ್ಯ. 27 ವರ್ಷದ ಈಕೆ ಎರಡು ಮಕ್ಕಳ ತಾಯಿ. ಹಾಸನ ಜಿಲ್ಲೆ ಹೊಳೇನರಸಿಪುರ ತಾಲೂಕಿನ ಮಾವಿನಕೆರೆ ಗ್ರಾಮದವರು. ಇದೇ ಹಾಸನದ ಆಲೂರು ತಾಲೂಕಿನ ಮಣಿಪುರದ ಶಿವಾನಂದ್ ಅವರನ್ನು ಮದುವೆಯಾಗಿದ್ದಳು. ಶಿವಾನಂದ್​ ದಾಬಸ್​ಪೇಟೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಈ ದಂಪತಿಯು ತಮ್ಮ ಇಬ್ಬರು ಮಕ್ಕಳೊಂದಿಗೆ ದಾಬಸ್ ಪೇಟೆಯಲ್ಲಿ ವಾಸವಾಗಿದ್ದರು.

ಗಂಡ ಶಿವಾನಂದ್ ಕುಡಿತದ ಚಟಕ್ಕೆ ದಾಸನಾಗಿದ್ದ. ಇದರಿಂದ ಆತನ ಲಿವರ್ ಫೇಲ್ಯೂರ್ ಆಗಿ ಆರೋಗ್ಯ ಹದಗೆಟ್ಟಿತ್ತು. ಇದೇ ವೇಳೆ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದ ಶಿವಾನಂದ್ ಮನೆಯಲ್ಲಿಯೇ ಇದ್ದ. ಆರೋಗ್ಯ ಮತ್ತು ಕೆಲಸದ ಕಾರಣಕ್ಕಾಗಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಇದೇ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

ಸಂಸಾರಿಕ ಜಗಳದಿಂದ ಬೇಸರಗೊಂಡಿದ್ದ ಕಾವ್ಯ ತನ್ನ ಮಕ್ಕಳೊಂದಿಗೆ ತವರು ಮನೆಗೆ ಸೇರಿದ್ದರು. ಬಳಿಕ ಎಲ್ಲ ಸಮಸ್ಯೆ ಬಗೆಹರಿಸಿ ಕಾವ್ಯಳನ್ನು ಮತ್ತೆ ಗಂಡನ ಮನೆಗೆ ಕಳುಹಿಸಿದ್ದರು ಪೋಷಕರು. ಮಗಳ ಯೋಗಕ್ಷೇಮ ವಿಚಾರಿಸಲು ಆಗಾಗ್ಗೆ ಪೋಷಕರು ಕಾವ್ಯಗೆ ಫೋನ್​ ಮಾಡುತ್ತಿದ್ದರು. ಕಳೆದ ಶನಿವಾರ ಫೋನ್ ಮಾಡಿದ್ದಾಗ ಗಂಡ ಶಿವಾನಂದ್ ಹೆಂಡತಿ ಮಲಗಿದ್ದಾಳೆಂದು ಹೇಳಿದ್ದನು. ಬಳಿಕ ಮತ್ತೆ ಫೋನ್​ ಮಾಡಿದಾಗ ಸುಳ್ಳು ಉತ್ತರ ಕೊಡುತ್ತಿದ್ದಾನೆ ಎಂದು ಕಾವ್ಯ ಪೋಷಕರಿಗೆ ಅನುಮಾನ ಬಂದಿತ್ತು. ಸಂಶಯಗೊಂಡ ತವರು ಮನೆಯವರು ಬಂದು ನೋಡಿದಾಗ ಕಾವ್ಯ ಶವವಾಗಿ ಪತ್ತೆಯಾಗಿದ್ದಾಳೆ ಎಂದು ತಿಳಿಸಿದರು.

ಸೋಮವಾರ ಬೆಳಗ್ಗೆ ವಿಷಯ ತಿಳದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಪೊಲೀಸ್​ ವರಿಷ್ಠಾಧಿಕಾರಿ ಬಾಬಾ ಅವರು ಸಹ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಆಕೆಯ ಗಂಡನೇ ಕೃತ್ಯ ಮಾಡಿರುವ ಸಾಧ್ಯತೆ ಇದೆ. ವಿಚಾರಣೆಯ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *