ಬೆಂಗಳೂರು : ನಾನು ಈ ಸರಕಾರದ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮೊದಲ ದಿನದಿಂದಲೂ ಮಾತನಾಡುತ್ತಲೇ ಇದ್ದೇನೆ. ಇದನ್ನು ಸಹಿಸಲಾಗದೆ ಸರಕಾರದಲ್ಲಿ ದೊಡ್ಡ ಮಟ್ಟದ ಒಳಸಂಚು ನಡೆಯುತ್ತಿದೆ. ನನಗೆ ಖುದ್ದು ಸಿಎಂ ಮನೆಯಿಂದಲೇ ಮಾಹಿತಿ ಬರುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಎಂ ಕಾನೂನು ತಜ್ಞರು ಏನು ಮಾಡ್ತಿದ್ದಾರೆ, ಏನೆಲ್ಲಾ ಶೋಧ ಮಾಡುತ್ತಾ ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎನ್ನುವ ವಿಷಯ ನನಗೆ ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಿಎಂ ಅಂಡ್ ಟೀಮ್ ನನ್ನ ಮಾಹಿತಿಯನ್ನು ಕೆದಕುತ್ತಿದೆ. ಆದರೆ, ಅಕ್ರಮ ಗಣಿಗಳಿಗೆ ಅನುಮತಿ ನೀಡಿದ ವಿಷಯಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರದ್ದು ಬ್ರಹ್ಮಾಂಡವೇ ಇದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ ಎಂದು ದಾಖಲೆಗಳನ್ನು ತುಂಬಿದ್ದ ಕವರ್ ಒಂದನ್ನು ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ತೋರಿಸಿದರು.
2015ರಲ್ಲಿ ಬೇಲೆಕೇರಿಯಲ್ಲಿ ಅದಿರು ಕದ್ದು ಸಿಕ್ಕಿಕೊಂಡಿರುವ ಅಪರಾಧಿಗಳ ಗಾಣಿಗಳಿಗೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಅಂದರೆ, ರಾಜ್ಯ ಸರಕಾರಕ್ಕೆ ಕೋಟ್ಯಂತರ ರುಪಾಯಿ ವಂಚಿಸಿದ ಕುಳಗಳಿಗೆ ಗಣಿಗಾರಿಕೆ ಅನುಮತಿ ಕೊಟ್ಟಿದ್ದಾರೆ. ನನ್ನದು ಒಂದೇ ಒಂದು ಎಂದು ಇವರು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಅವರದ್ದು ಒಂದಲ್ಲ, ಅನೇಕ ಹಗರಣಗಳು ಇವೆ ಎಂದರು. ಈ ದಾಖಲೆಗಳನ್ನು ನಾನು ಈಗಲೇ ಬಿಡುಗಡೆ ಮಾಡಲ್ಲ. ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ. ಏಕೆಂದರೆ, ಸಿಎಂ ಸುತ್ತಮುತ್ತ ದಾಖಲೆಗಳನ್ನು ತಿದ್ದುವ ಪ್ರವೀಣರು ಅನೇಕರು ಇದ್ದಾರೆ. ನಾನೂ ಸೇಫ್ ಗೇಮ್ ಆಡಬೇಕಲ್ವಾ? ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ. ನಾನು ಅಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಕಾಂಗ್ರೆಸ್ಸಿನವರು ಅಬ್ರಹಾಂ ಅವರ ಹಿನ್ನೆಲೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾನು ಪ್ರಶ್ನೆ ಮಾಡುತ್ತೇನೆ. ಎಸ್ ಐಟಿ ತನಿಖೆ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದೀರಿ. ಅದಕ್ಕೆ ಕೋರ್ಟು ಒಪ್ಪಿ, ಮೂರು ತಿಂಗಳ ಒಳಗೆ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಬೇಕು ಎಂದು ಆದೇಶ ಕೊಟ್ಟಿದೆ. ನೀವು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ, ಹಾಗಾದರೆ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರಿಂದ ಹೇಗೆ ಅನುಮತಿ ಕೇಳುತ್ತಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಅಬ್ರಹಾಂ ಅವರು 2011ರಲ್ಲಿಯೇ ನಗರದ ಹೆಚ್ಚುವರಿ ಸೆಷೆನ್ಸ್ ಕೋರ್ಟ್ ನಲ್ಲಿ ದೂರು ಹಾಕಿದ್ದರು. ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ನನ್ನ ಮೇಲೆ ದೂರು ದಾಖಲು ಮಾಡಿದ್ದರು. ಆಮೇಲೆ ನಾನು ಹೈಕೋರ್ಟ್ ಗೆ ಮೊರೆ ಹೋದೆ. ಅಲ್ಲಿ ₹150 ಕೋಟಿ ಗಣೆ ಲಂಚ ಪ್ರಕರಣ ಹಾಗೂ ಜಂತಕಲ್ ಗಣಿ ಗುತ್ತಿಗೆ ನವೀಕರಣ ಪ್ರಕರಣ ವಜಾ ಆದವು. ನ್ಯಾ.ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯಲ್ಲಿ ನನ್ನ ವಿರುದ್ಧ ಯಾವುದೇ ದೋಷಾರೋಪ ಆಗಲಿ, ತಪ್ಪು ಎಸಗಿದ್ದೇನೆ ಎಂಬ ಉಲ್ಲೇಖವಾಗಲಿ ಅಥವಾ ಕ್ರಮ ಜರುಗಿಸಬೇಕು, ತನಿಖೆ ನಡೆಯಬೇಕು ಎನ್ನುವ ಶಿಫಾರಸು ಆಗಲಿ ಇಲ್ಲ. ಅವರು ಈ ಬಗ್ಗೆ ಮುಂದಿನ ಸರ್ಕಾರ ಪರಿಶೀಲನೆ ಮಾಡಬಹುದು ಎಂದಷ್ಟೇ ಹೇಳಿದ್ದಾರೆ ಎಂದು ಹೇಳಿದರು.
ಹೈಕೋರ್ಟ್ ನಲ್ಲಿ ಜಂರಕಲ್ ಮತ್ತು ಗಣಿ ಲಂಚ ಪ್ರಕರಣ ವಜಾ ಆದರೂ ಸಾಯಿ ವೆಂಕಟೇಶ್ವರ ವಿವಾದದ ತನಿಖೆಗೆ ಒಪ್ಪಿಗೆ ನೀಡಲಾಗಿತ್ತು. ನಾನು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದೆ. 2017ರಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ತನಿಖೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಮೂರು ತಿಂಗಳಲ್ಲಿ ತನಿಖೆಯನ್ನು ಮುಗಿಸಲಿಲ್ಲ. ಅಂತಿಮ ವರದಿಯನ್ನು ನೀಡಲಿಲ್ಲ. ಈಗ ಎಷ್ಟು ವರ್ಷ ಆಯಿತು? ಅದು ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತೆ ಅಲ್ಲವೇ? ಎಂದು ಕುಮಾರಸ್ವಾಮಿ ಕೇಳಿದರು.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 61 ಕೇಸ್ ದಾಖಲಾಗಿವೆ. ಹಾಗಾದರೆ, ಅವರು ಎಷ್ಟು ಸಲ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ ಸಚಿವರು; ಸಿದ್ದರಾಮಯ್ಯ ವಿರುದ್ಧದ 61 ಕೇಸುಗಳ ಪೈಕಿ 50 ಕೇಸುಗಳ ತನಿಖೆಯೇ ಆಗಿಲ್ಲ ಎಂದು ಪತ್ರಿಕಾ ವರದಿ ಹೇಳುತ್ತದೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ನಾನು ಕಪ್ಪು ಚುಕ್ಕೆ ಇಲ್ಲದ ನಾಯಕ, ಹಿಂದುಳಿದ ನಾಯಕ ಎಂದು ಸಿಎಂ ಹೇಳಿಕೊಳ್ಳುತ್ತಾರೆ. ಹಾಗಾದರೆ ಇವರು ಐದು ವರ್ಷ ಸಿಎಂ ಆಗಿದ್ದಾಗ ಲೋಕಾಯುಕ್ತವನ್ನು ಏನು ಮಾಡಿದರು? ಎಸಿಬಿಯನ್ನು ಯಾಕೆ ಹುಟ್ಟು ಹಾಕಿದರು? ಎಂದು ಖಾರವಾಗಿ ಪ್ರಶ್ನಿಸಿದರು.