ಪಾಕ್ ಸರ್ಕಾರಕ್ಕೆ ಇಲಿ ಕಾಟ : ಸಂಸತ್ ಭವನದಲ್ಲಿ ಬೆಕ್ಕು ಸಾಕಲು 12 ಲಕ್ಷ ರೂ. ವೆಚ್ಚ

ಪಾಕಿಸ್ತಾನ: ಆಗೊಮ್ಮೆ ಈಗೊಮ್ಮೆ ಅಣುಬಾಂಬ್ ಬೆದರಿಕೆ ಹಾಕುವ ಪಾಕಿಸ್ತಾನಕ್ಕೆ ಇಲಿಗಳ ಭಯ ಶುರವಾಗಿದೆ ಅಂತೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕ್ಗೆ ಇಲಿಗಳು ಹೊಸ ತಲೆನೋವಾಗಿ ಪರಿಣಮಿಸಿದೆ. ಪಾಕ್ ಸಂಸತ್ತಿನಲ್ಲಿ ಇಲಿಗಳ ಕಾಟ ನಿಂತಿಲ್ಲ. ಸಂಸತ್ನಲ್ಲಿರುವ ಮಹತ್ವದ ದಾಖಲೆಗಳನ್ನು ತಿಂದು ಹಾಕಿವೆ.

ಹೀಗಾಗಿ ಸಂಸತ್ ಭವನದಲ್ಲಿರುವ ಇಲಿಗಳ ಸಮಸ್ಯೆಗಳ ನಿವಾರಣೆಗಾಗಿ 12 ಲಕ್ಷ ರೂ. ವ್ಯಯಿಸಿ ಬೆಕ್ಕುಗಳನ್ನು ತರಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಪಾಕಿಸ್ತಾನದ ಸಂಸತ್ತಿನಲ್ಲಿ ಇಲಿಗಳಿವೆ. ಪ್ರಮುಖ ಕಡತಗಳನ್ನು ಇಲಿಗಳು ತಿಂದು ಹಾಕಿವೆ . ಇಲಿಗಳನ್ನು ಎದುರಿಸಲು ಪಾಕಿಸ್ತಾನದ ಸಂಸತ್ತಿನಲ್ಲಿ ಬೆಕ್ಕುಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಪಾಕಿಸ್ತಾನದ ಕ್ಯಾಪಿಟಲ್ ಡೆವಲಪ್ಮೆಂಟ್ ಅಥಾರಿಟಿ (ಸಿಡಿಎ) ಸರ್ಕಾರಿ ಫೈಲ್ಗಳ ಭದ್ರತೆಗಾಗಿ ಬೆಕ್ಕುಗಳನ್ನು ಇರಿಸಲು ನಿರ್ಧರಿಸಿದೆ. ವಿಶೇಷವೆಂದರೆ ಇದಕ್ಕಾಗಿ 12 ಲಕ್ಷ ಪಾಕಿಸ್ತಾನಿ ರೂಪಾಯಿ ಬಜೆಟ್ ಕೂಡ ಫಿಕ್ಸ್ ಮಾಡಲಾಗಿದೆ.

ಪಾಕಿಸ್ತಾನದ ಸಂಸತ್ತಿನಲ್ಲಿ ಇಲಿ, ಬೆಕ್ಕುಗಳ ಸುದ್ದಿ ಕೇಳಲು ವಿಚಿತ್ರ ಎನಿಸಬಹುದು ಆದರೆ ಇಲ್ಲಿನ ಸಂಸದರು ಮತ್ತು ನೌಕರರು ಹಾಗೂ ಸರ್ಕಾರ ಈ ಸಮಸ್ಯೆ ಎದುರಿಸುತ್ತಿದೆ. ಸಂಸತ್ ಭವನದಲ್ಲಿ ಇಲಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇಲಿಗಳ ಈ ಸಮಸ್ಯೆ ಹೊಸದಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಗಂಭೀರವಾಗಿದೆ. ಇಲಿಗಳು ದಾಖಲೆಗಳನ್ನು ಕಿತ್ತುಕೊಳ್ಳುವುದು ಮಾತ್ರವಲ್ಲದೆ ಕಂಪ್ಯೂಟರ್ ವೈರ್ಗಳಿಗೂ ಹಾನಿ ಮಾಡುತ್ತಿವೆ. ಇದಲ್ಲದೇ ಇಲಿಗಳಿಂದಾಗಿ ಸಂಸತ್ತಿನಲ್ಲಿ ಕೊಳೆ ಮತ್ತು ರೋಗಗಳ ಭೀತಿಯೂ ಹೆಚ್ಚಿದೆ.

ಸಂಸತ್ನಲ್ಲಿ ತೊಂದರೆ ಕೊಡುತ್ತಿರುವ ಇಲಿಗಳ ನಿವಾರಣೆಗಾಗಿ ಬಲೆ ಬಿಡುವುದು ಹಾಗೂ ರಾಸಾಯನಿಕಗಳ ಬಳಕೆ ಎಲ್ಲವನ್ನೂ ಮಾಡಲಾಗಿದೆ. ಆದರೆ ಇಲ್ಲಿಗಳ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದೀಗ ಸಂಸತ್ತಿನಲ್ಲಿ ಇಲಿಗಳ ಕಾಟಕ್ಕೆ ಬೆಕ್ಕನ್ನು ಸಾಕಬೇಕು ಎಂದು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.ಸಂಸತ್ತಿನಲ್ಲಿ ಇಲಿಗಳನ್ನು ಹಿಡಿಯಲು ಬೆಕ್ಕುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇಲಿಗಳನ್ನು ಕೊಲ್ಲಲು ಮತ್ತು ಓಡಿಸಲು ಬೆಕ್ಕುಗಳು ಸಹಾಯಕವಾಗುತ್ತವೆ ಎಂದು ನಂಬಲಾಗಿದೆ.

ಸಂಸದರು ಏನು ಹೇಳುತ್ತಾರೆ?

ಸಂಸತ್ತಿನ ಕಲಾಪ ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆಯುತ್ತದೆ. ಇಲಿಗಳ ಸಮಸ್ಯೆ ಇದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಸಂಸತ್ ಭವನದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಸಂಸತ್ತಿನ ಕಾರ್ಯಚಟುವಟಿಕೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಇಂತಹ ಕ್ರಮದ ಹಿಂದಿನ ಉದ್ದೇಶವಾಗಿದೆ.

ಈ ಪ್ರಕರಣ ಪಾಕಿಸ್ತಾನ ವಿಶ್ವದಾದ್ಯಂತ ಜನರ ಗಮನ ಸೆಳೆದಿರುವುದು ಒಂದಂತೂ ಸತ್ಯ. ಇಲಿಗಳಿಂದ ತೊಂದರೆಗೊಳಗಾಗಿರುವ ಪಾಕಿಸ್ತಾನದ ಸಂಸತ್ತು ಈಗ ಬೆಕ್ಕುಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪರಿಹಾರವು ಎಷ್ಟು ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *