ತಿರುವನಂತಪುರಂ: ಇಂದು (ಆಗಸ್ಟ್ 31) ನಿವೃತ್ತಿಯಾದ ಡಾ.ವಿ.ವೇಣು ಅವರ ಸ್ಥಾನಕ್ಕೆ ಅವರ ಪತ್ನಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರು ಕೇರಳದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ವೇಣು ಅವರು ಶಾರದಾ ಅವರ ಪತಿಯಾಗಿದ್ದು, ಇಂದು ತಮ್ಮ ಅಧಿಕಾರ ಹಸ್ತಾಂತರ ಮಾಡಿದರು. ಕೇರಳದ ಇತಿಹಾಸದಲ್ಲಿ ರಾಜ್ಯದ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಪತಿಯ ನಂತರ ಪತ್ನಿ ವಹಿಸಿಕೊಂಡಿದ್ದು ಇದೇ ಮೊದಲು.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಾರದಾ ಮುರಳೀಧರನ್ ಅವರನ್ನು ರಾಜ್ಯದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಮುಖ್ಯ ಕಾರ್ಯದರ್ಶಿಯಾಗಿ ಅವರು ಅಧಿಕಾರ ವಹಿಸಿಕೊಂಡರು. ಶಾರದಾ ಅವರು ಪ್ರಸ್ತುತ ಯೋಜನೆ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದು, ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿತ್ತು.
ಸಿಎಂ ಪ್ರಸ್ತಾಪ: ಶುಕ್ರವಾರ ನಡೆದ ವೇಣು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ದಂಪತಿಯ ಬಗ್ಗೆ ಪ್ರಸ್ತಾಪಿಸಿ ಕೆಲವು ಹೇಳಿಕೆ ನೀಡಿದ್ದರು. ”ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಪತಿಯೊಬ್ಬರು ತಮ್ಮ ಪತ್ನಿಗೆ ಹಸ್ತಾಂತರಿಸಿದ್ದಾರೆ . ಕೇರಳದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ನಾಗರಿಕ ಸೇವೆಯಲ್ಲಿರುವ ಈ ದಂಪತಿ, ಜಿಲ್ಲಾಧಿಕಾರಿ ಸೇರಿದಂತೆ ರಾಜ್ಯದ ನಾನಾ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದು, ಅವರ ಸರಳ ವ್ಯಕ್ತಿತ್ವಕ್ಕೆ ಸಾಕ್ಷಿ. ಇನ್ನು ಮುಂದೆ ಪತಿಯ ಉತ್ತರಾಧಿಕಾರಿ ಶಾರದಾ ಮುರಳೀಧರನ್ ಮುಂದುವರೆಯಲಿದ್ದಾರೆ” ಎಂದು ಐಎಎಸ್ ದಂಪತಿಯ ಸೇವೆಯನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದ್ದರು.
ಕೇರಳದ ಐದನೇ ಮಹಿಳಾ ಮುಖ್ಯ ಕಾರ್ಯದರ್ಶಿ: 1990ರಲ್ಲಿ ಪಾಲಕ್ಕಾಡ್ ಸಹಾಯಕ ಕಲೆಕ್ಟರ್ ಆಗಿ ಸೇವೆ ಆರಂಭಿಸಿದ ಶಾರದಾ ಮುರಳೀಧರನ್ ಅವರು ತಿರುವನಂತಪುರಂ ಜಿಲ್ಲಾಧಿಕಾರಿಯಾಗಿ, ಕುಟುಂಬಶ್ರೀ ಮಿಷನ್ ನಿರ್ದೇಶಕರಾಗಿ, ಸ್ಥಳೀಯಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಡೈರೆಕ್ಟರ್ ಜನರಲ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೇರಳದ ಐದನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಇಂದು ಅಧಿಕಾರ ಸ್ವೀಕರಿಸಿರುವ ಶಾರದಾ ಅವರು ಮುಂದಿನ ವರ್ಷ ಏಪ್ರಿಲ್ 17ರವರೆಗೆ ಸೇವೆ ಹೊಂದಿದ್ದಾರೆ.