ಕೇದಾರನಾಥದಲ್ಲಿ ಏರ್​ಲಿಫ್ಟ್​​ ಮಾಡುವಾಗ ಹಗ್ಗ ತುಂಡಾಗಿ ಬಿದ್ದು ಹೆಲಿಕಾಪ್ಟರ್​​ ಪತನ

ಕೇದಾರನಾಥದಲ್ಲಿ ಏರ್​ಲಿಫ್ಟ್​​ ಮಾಡುವಾಗ ಹಗ್ಗ ತುಂಡಾಗಿ ಬಿದ್ದು ಹೆಲಿಕಾಪ್ಟರ್​​ ಪತನ

ನವದೆಹಲಿ: ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್​​ ಪತನವಾಗಿದೆ. ಯಾತ್ರಿಕರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್​ ತಾಂತ್ರಿಕ ದೋಷಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿತ್ತು. ಇದನ್ನು ಎಂಐ-17 ಹೆಲಿಕಾಪ್ಟರ್​ ಮೂಲಕ ದುರಸ್ತಿಗೆ ಕೊಂಡೊಯ್ಯುತ್ತಿದ್ದಾಗ ಜಾರಿಬಿದ್ದು ನಾಶವಾಗಿದೆ. ಕೇದಾರನಾಥದ ಮಂದಾಕಿನಿ ನದಿಯ ಬಳಿ ಈ ಹೆಲಿಕಾಪ್ಟರ್​​ ಪತನವಾಗಿದ್ದು, ಇದರ ವಿಡಿಯೋ ಲಭ್ಯವಾಗಿದೆ.

ಭಾರತೀಯ ವಾಯುಪಡೆಗೆ ಸೇರಿದ ಎಂಐ-17 ಹೆಲಿಕಾಪ್ಟರ್​​​ ದೋಷಯುಕ್ತ ಹೆಲಿಕಾಪ್ಟರ್​ ಅನ್ನು ಕೇದಾರನಾಥದಿಂದ ಗೌಚಾರ್​ಗೆ ಸಾಗಿಸುತ್ತಿತ್ತು. ಈ ವೇಳೆ ಟೋಯಿಂಗ್​ ಹಗ್ಗ ತುಂಡಾಗಿ ವಿಮಾನ ಎತ್ತರದಿಂದ ನೆಲಕ್ಕೆ ಬಿದ್ದು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರಿಕರನ್ನು ಸಾಗಿಸುತ್ತಿದ್ದಾಗ ದೋಷ: ನಾಶವಾದ ಹೆಲಿಕಾಪ್ಟರ್​​ ಅನ್ನು ಖಾಸಗಿ ಕಂಪನಿಯೊಂದು ನಿರ್ವಹಣೆ ಮಾಡುತ್ತಿತ್ತು. ಕೇದಾರನಾಥಕ್ಕೆ ಬರುವ ಯಾತ್ರಿಕರನ್ನು ಇದು ಹೊತ್ತು ತರುತ್ತಿದ್ದಾಗ ಮೇ ತಿಂಗಳಲ್ಲಿ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶವಾಗಿತ್ತು. ಬಳಿಕ ಕಾಪ್ಟರ್​ ಅಲ್ಲಿಯೇ ಕೆಟ್ಟು ನಿಂತಿತ್ತು. ಇದೀಗ ಹೆಲಿಕಾಪ್ಟರ್​ ಅನ್ನು ಭಾರತದ ವಾಯುಪಡೆಗೆ ಸೇರಿದ ಎಂಐ-17 ಹೆಲಿಕಾಪ್ಟರ್​​ ಮೂಲಕ ಅದನ್ನು ದುರಸ್ತಿಗಾಗಿ ಗೌಚಾರ್​ ಎಂಬಲ್ಲಿಗೆ ರವಾನಿಸಲಾಗುತ್ತಿತ್ತು.

ತೀವ್ರ ಗಾಳಿಯಿಂದ ಸಮತೋಲನ ಕಳೆದುಕೊಂಡ ದೋಷಯುಕ್ತ ಹೆಲಿಕಾಪ್ಟರ್​​ ಗಾಳಿಯಲ್ಲಿ ಎಳೆದಾಡಿದೆ. ಈ ವೇಳೆ ಟೋಯಿಂಗ್​ ಹಗ್ಗ ತುಂಡಾಗಿದೆ. ಮಂದಾಕಿನಿ ನದಿ ಬಳಿ ಹೋಗುತ್ತಿದ್ದಾಗ ಹೆಲಿಕಾಪ್ಟರ್​​ ಬಿದ್ದು ಪತನವಾಗಿದೆ. ಅದೃಷ್ಟವಶಾತ್​ ಅಪಘಾತದ ವೇಳೆ ಅದರೊಳಗೆ ಪ್ರಯಾಣಿಕರು, ಲಗೇಜ್​ ಇರಲಿಲ್ಲ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತನದ ನಂತರ ರಕ್ಷಣಾ ತಂಡವು ಸ್ಥಳಕ್ಕೆ ತಲುಪಿದೆ. ತಾಂತ್ರಿಕ ದೋಷವಿದ್ದ ವಿಮಾನ ನಾಶವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೇದಾರನಾಥ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್​ ಚೌಭೆ ತಿಳಿಸಿದ್ದಾರೆ.

ಕೇದಾರನಾಥ ಯಾತ್ರೆಗೆ ಭಾರೀ ಮಳೆ ಅಡ್ಡಿಯಾಗಿದೆ. ಇದರಿಂದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರನ್ನು ಹೆಲಿಕಾಪ್ಟರ್​​ಗಳ ಮೂಲಕ ಸಾಗಿಸಲಾಗುತ್ತಿತ್ತು. ಇದರಿಂದಾಗಿ ಯಾತ್ರಾರ್ಥಿಗಳ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡುಬಂದಿದೆ.

Leave a Reply

Your email address will not be published. Required fields are marked *