ಅದೇನು ಸಡಗರ! . ಹೌದು ಇದೇ ಬರುವ ಸೆಪ್ಟೆಂಬರ್ ಏಳನೇ ತಾರೀಖು ನಡೆಯುವ ಚೌತಿ ಆಚರಣೆಗೆ ಊರು ಪರವೂರಿನೆಲ್ಲೆಡೆ ನಾವು ಸಿದ್ಧರಾಗುತ್ತಿದ್ದೇವೆ. ಈ ಲೇಖನಕ್ಕೆ ಮೊದಲು ಗಣೇಶನ ಹುಟ್ಟು ಹೇಗಾಯಿತೆಂಬುದನ್ನು ಅರಿತುಕೊಳ್ಳೋಣ.
ಗಣೇಶನ ಜನನ
ಸ್ವರ್ಣಗೌರಿಯ ಮಾನಸ ಪುತ್ರನೀತ. ಗೌರಿಯು ಒಮ್ಮೆ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಆಣತಿಯಂತೆ ಗಣಫನು ಮನೆಯನ್ನು ಕಾಯುತ್ತಿರುತ್ತಾನೆ. ಪರಮೇಶ್ವರನು ಮನೆಗೆ ಬಂದಾಗ ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.
ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋಧಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ
ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಜೋಡಿಸುತ್ತಾರೆ. ಹೀಗಾಗಿ ಈತನಿಗೆ ಗಜಮುಖನೆಂಬ ಹೆಸರು ಶಾಶ್ವತವಾಯಿತು. ಗಣಪತಿ, ಗಣೇಶ, ಗಣಪ, ಲಂಬೋಧರ ಇತ್ಯಾದಿ ಹೆಸರಿನಿಂದಲೂ ಗಣಪ ದೇವರು ಗುರುತಿಸಿಕೊಂಡಿದ್ದಾರೆ.
ಆದಿಪೂಜಿತ ಗಣಪ
ಯಾವುದೇ ಶುಭ ಕಾರ್ಯವನ್ನು ಆರಂಭಿಸುವಾಗಲೂ ಗಣಪತಿ ದೇವರಿಗೆ ಅರ್ಚನೆ ಮಾಡುವುದು ವಾಡಿಕೆ. ಯಕ್ಷಗಾನವಾದರೂ ಅಷ್ಟೇ. ಆರಂಭದಲ್ಲಿ ರಂಗಪೂಜೆ (ಗಣಪತಿ ಪೂಜೆ) ಮಾಡಿಯೇ ಪಾತ್ರಗಳು ಮಾತನಾಡಲು ತೊಡಗುವುದು.
ಮೋದಕ ಪ್ರಿಯ ಗಣಪ
ಗಣಪತಿ ದೇವರಿಗೆ ಮೋದಕವೆಂದರೆ ಬಹಳ ಇಷ್ಟವಂತೆ. ಗಣಪನ ಜನನವಾದಾಗ ದೇವತೆಗಳೆಲ್ಲ ಸೇರಿ ಮೋದಕ ಮಾಡಿ ತಿನಿಸಿರುವರೆಂಬುದು ಹಿಂದಿನ ಕಥೆ.
ಚೌತಿಯಂದು ಚಂದ್ರನ ನೋಡಿದರೆ ಅಪವಾದ
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು. ನೋಡಿದರೆ ಅಪವಾದ ತಪ್ಪದಂತೆ. ಇದರ ಹಿಂದೆ ಒಂದು ಕಥೆಯಿದೆ: ಗಣಪತಿ ದೇವರು ಒಮ್ಮೆ ಹುಟ್ಟುಹಬ್ಬದ ದಿನ ಎಲ್ಲರ ಮನೆಗಳಿಗೆ ತೆರಳಿ ಹೊಟ್ಟೆತುಂಬಾ ತಿಂದು ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರಂತೆ. ಡೊಳ್ಳು ಹೊಟ್ಟೆ ಗಣಪನಿಗೆ ದಾರಿಯಲ್ಲಿ ಒಂದು ಹಾವು ಇದಿರಾಯಿತಂತೆ. ಹಾವನ್ನು ಕಂಡು ಬೆದರಿದ ಇಲಿ ಎಡವಿದಾಗ ಕೆಳಗೆ ಬಿದ್ದ ಗಣಪನ ಹೊಟ್ಟೆ ಬಿರಿಯಿತು. ದಂತವೂ ಮುರಿಯಿತು. (ಏಕದಂತ) ಮೇಲೆದ್ದ ಗಣಪ ಅದೇ ಹಾವನ್ನು ಹಿಡಿದು ಹೊಟ್ಟೆಗೆ ಕಟ್ಟಿ ಮತ್ತೆ ಸವಾರಿ ಹೊರಟರಂತೆ. ಗಣಪನ ಈ ಪರಿಸ್ಥಿತಿಯನ್ನು ನೋಡಿ ಮೇಲೆ ಬಾನಲ್ಲಿದ್ದ ಚಂದ್ರ ಕಿಸಕ್ಕನೆ ನಕ್ಕನಂತೆ.
ಗಣಪನಿಗೆ ಸಿಟ್ಟು ಬಂದು ಚಂದ್ರನಿಗೆ ಶಾಪವಿತ್ತರಂತೆ. ಅದು ಹೇಗೆಂದರೆ “ಇನ್ನು ಮುಂದೆ ನಿನ್ನನ್ನು ಯಾರೂ ಯಾವಾಗಲೂ ನೋಡದಿರಲಿ. ಒಂದು ವೇಳೆ ನೋಡಿದರೆ ಅವರಿಗೆ ಅಪವಾದ ಬರಲಿ” ಎಂದು. ಅಷ್ಟರಲ್ಲಿ ಚಂದ್ರನಿಗೆ ತನ್ನ ತಪ್ಪಿನ ಅರಿವಾಗಿತ್ತು. ಶಾಪವನ್ನು ಹಿಂತೆಗೆದುಕೊಳ್ಳುವಂತೆ ಪರಿಪರಿಯಾಗಿ ಗಣಪನಲ್ಲಿ ಬೇಡಿಕೊಂಡನಂತೆ. ಆಗ ಗಣಪತಿಯೂ ಕೊಂಚ ತಣ್ಣಗಾಗಿ “ಯಾರೂ ಯಾವಾಗಲೂ ನೋಡದಿರಲಿ” ಎಂಬುದನ್ನು ಸ್ವಲ್ಪ ಬದಲಾಯಿಸಿ “ಭಾದ್ರಪದ ಶುಕ್ಲ ಚೌತಿಯಂದು ಯಾರೂ ನಿನ್ನನ್ನು ನೋಡದಿರಲಿ. ನೋಡಿದರೆ ಅವರಿಗೆ ಶಾಪ ತಟ್ಟುತ್ತದೆ’ ಎಂದು ಹೇಳಿದರಂತೆ. ಹಾಗಾಗಿ ಚೌತಿಯ ದಿನದಂದು ಚಂದ್ರನನ್ನು ನೋಡಬಾರದೆಂದು ಹೇಳುತ್ತಾರೆ. ನೋಡಿದರೆ ಅನಾವಶ್ಯಕ ಸುಳ್ಳು ಅಪವಾದಗಳು ಬರುತ್ತವಂತೆ.
ವ್ಯಾಸ ಮಹರ್ಷಿಗಳಿಗೆ ಮಹಾಭಾರತವನ್ನು ಲೋಕಕ್ಕೆ ಪರಿಚಯಿಸಲು ಸಹಾಯ ಮಾಡಿದ್ದು, ತಂದೆತಾಯಿಯನ್ನೇ ತನ್ನ ಜಗತ್ತೆಂದು ಹೇಳಿ ಮೂರು ಸುತ್ತು ಬಂದದ್ದು..ಹೀಗೆ ಇನ್ನೂ ಹಲವಾರು ಕಥೆಗಳಿಗೆ ಪಾತ್ರವಾದ ಗಣೇಶನ ಹಬ್ಬವೇ ಗಣೇಶ ಚತುರ್ಥಿ.
ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಆ ಮೂಲಕ ಪೂಜೆಯನ್ನು ಗಣಪತಿಗೆ ಅರ್ಪಿಸುವುದು ಗಣೇಶ ಹಬ್ಬದ ವಿಶೇಷ. ಕೆಲವೆಡೆಗಳಲ್ಲಿ ಪ್ಲಾಸ್ಟಿಕ್ ಗಣಪನನ್ನು ಕೂರಿಸಿ ಪೂಜೆ ಮಾಡುವುದು ಕಂಡುಬರುತ್ತಿದೆ. ಹೀಗೆ ಮಾಡಬಾರದು. ಪ್ಲಾಸ್ಟಿಕ್ ನೀರಿನಲ್ಲಿ ಕರಗಿ ಹೋಗದೇ ಮರುದಿನವೋ ಅಥವಾ ಒಂದು ವಾರದ ಬಳಿಕವೋ
ಪ್ಲಾಸ್ಟಿಕ್ ಗಣಪನ ಅಂಗಾಂಗಗಳು ಅಲ್ಲಲ್ಲಿ ನೀರಿನಲ್ಲಿ ತೇಲುತ್ತಾ ಬರುವಾಗ ಒಮ್ಮೆ ನಮ್ಮ ಬಗ್ಗೆ ನಮಗೇ ಪಾಪಪ್ರಜ್ಞೆ ಕಾಡಬೇಕು. ಹಾಗಾಗಿ ಎಲ್ಲರೂ ಮಣ್ಣಿನ ಗಣಪನನ್ನೇ ಪೂಜಿಸಿ ವಿಸರ್ಜಿಸಿದರೆ ನಾವು ಮಾಡಿದಂತಹ ಪೂಜೆಗೆ ಅಲ್ಪವಾದರೂ ಫಲ ಸಿಗಬಹುದಲ್ಲವೇ?
ಡಿಜೆಯ ವಿಷಯ ಹೇಳಬೇಕೆಂದರೆ ನನ್ನ ಪ್ರಕಾರ ಚೌತಿಯ ದಿನವಾಗಲೀ, ಅಥವಾ ಯಾವುದೇ ಶುಭ ಸಮಾರಂಭಗಳಲ್ಲಾಗಲೀ ಭಕ್ತಿಗೀತೆಯನ್ನೇ ಆಲಾಪಿಸುವುದು ಸೂಕ್ತವೆಂದು ನನ್ನ ಅಭಿಪ್ರಾಯ. ಈ ವಿಷಯವಾಗಿ ನಾನು ಹೆಚ್ಚು ಹೇಳುವುದಿಲ್ಲ. ಕಳೆದ ವರ್ಷ ಈ ವಿಚಾರವಾಗಿ ನಾನು ಚರ್ಚೆ ಮಾಡಿದಾಗ ಒಬ್ಬರು ಹೇಳಿದ್ದರು “ನಮಗೆ ವರ್ಷದಲ್ಲಿ ಒಮ್ಮೆಯಾದರೂ ಈ ರೀತಿ ಮನರಂಜನೆ ಸಿಗಬಾರದೇ? (ಡಿಜೆ ಹಾಕಿ ಡ್ಯಾನ್ಸ್ ಮಾಡುವುದರಿಂದ ಮನರಂಜನೆ) ಎಂದು. ಈ ಮನರಂಜನೆಗಳೆಲ್ಲಾ ಪೂಜೆಯ ದಿನಗಳಲ್ಲೇ ಆಗಬೇಕೆಂದು ಯಾಕೆ ಇಚ್ಛಿಸುತ್ತಾರೋ ಅವರೇ ಬಲ್ಲರು. ಇರಲಿ ಅವರವರ ಭಕ್ತಿ ಭಾವ ಅವರವರು ಕಂಡಂತೆ.
ಏನೇ ಆಗಲಿ ಈ ಗಣೇಶ ಚತುರ್ಥಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.