ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ: ಷರತ್ತುಗಳೇನು?

Idgah Ground, Hubballi

Idgah Ground, Hubballi

ಹುಬ್ಬಳ್ಳಿ : ಪ್ರತಿ ವರ್ಷ ಗಣೇಶ ಚತುರ್ಥಿ ಬಂದಾಗ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತ ಸುದ್ದಿಗಳು ಹೆಚ್ಚು ಸದ್ದಾಗುತ್ತವೆ. ಕಳೆದ ವರ್ಷದಂತೆ ಈ ಬಾರಿಯು ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ.

ಅನುಮತಿ ದೊರೆಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು, ಗಣೇಶ ಮಂಡಳಿಗಳ ಸದಸ್ಯರಲ್ಲಿ ಹರ್ಷ ನೂರ್ಮಡಿ ಹೆಚ್ಚಾಗಿದೆ.

ಹುಬ್ಬಳ್ಳಿ ಚನ್ನಮ್ಮ ವೃತ್ತದ ಪಕ್ಕದಲ್ಲೇ ಇರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಗಜಾನನ ಉತ್ಸವ ಮಹಾಮಂಡಳಿ ಮತ್ತು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ಅನುಮತಿ ಪತ್ರ ನೀಡುವ ಜೊತೆಗೆ ಷರತ್ತುಗಳ ಏನೇನಿರಲಿವೆ ಎಂಬುದನ್ನು ತಿಳಿಸಿದ್ದಾರೆ.

ಗಣೇಶ ಉತ್ಸವ ಆಚರಣೆಗಾಗಿ ಒಟ್ಟು ಐದು ಸಂಘಟನೆಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಹಿನ್ನೆಲೆ ಮನವಿಗೆ ಒಪ್ಪಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಷರತ್ತು ಸಹಿತ ಮೂರು ದಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ‘ಟಿವಿ ನೈನ್’ ವರದಿ ಮಾಡಿದೆ.

ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು

ಕಳೆದ ವರ್ಷ ಇದೇ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೋರಿದ್ದ ಗಣೇಶ ಮಂಡಳಿಗಳ ಪೈಕಿ ಒಂದಕ್ಕೆ ಅವಕಾಶ ಸಿಕ್ಕಿತ್ತು. ಅಂದು ಈ ಪ್ರದೇಶದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು. ಸಾಕಷ್ಟು ಬೆಳವಣಿಗೆ ಮಧ್ಯೆ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಮಿತಿಯು ಅನುಮತಿ ನೀಡಿದ್ದರ ವಿರುದ್ಧ ಹೋರಾಟಕ್ಕೆ ನಿರ್ಧರಿಸಿತ್ತು. ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು.

ಪೊಲೀಸರ ಮೇಲೆ ನಂಬಿಕೆ ಇದೆ: ಸಾವಿರ ಮಠದ ಸ್ವಾಮೀಜಿ

ಆದರೆ ಈ ವರ್ಷ ಅಂತಹ ಪ್ರಮೇಯವೇ ಇಲ್ಲ ಎನ್ನಲಾಗುತ್ತಿದೆ. ನಿಯಮಗಳಂತೆ ನಾಲ್ಕರಿಂದ ಐದು ಗಜಾನನ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೇಳಿದ್ದು, ಅವಕಾಶ ಸಿಕ್ಕಿದೆ. ಈ ಕುರಿತು ಗಣೇಶ ಉತ್ಸವ ಸಮಿತಿ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮೂರು ಸಾವಿರ ಮಠದ ಶ್ರೀ ಗುರು ಸಿದ್ಧರಾಜಯೋಗಿಂದ್ರ ಅವರು ಮಾತನಾಡಿದ್ದಾರೆ. ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಸ್ವಾಮೀಜಿಗಳು ಮಾತನಾಡಿ, ನಂಬಿಕೆ ಆಧಾರದಲ್ಲಿ ಗಣೇಶೋತ್ಸವ ನಡೆಸೋಣ. ಸದ್ಯ ಹುಬ್ಬಳ್ಳಿ ಧಾರವಾಡದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಈಗ ಬದಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಪೊಲೀಸರ ಮೇಲೆ ನಂಬಿಕೆ ಇರಲಿಲ್ಲಿ, ಈಗ ಆ ನಂಬಿಕೆ ಬಂದಿದೆ. ಏಕೆಂದರೆ ಹುಬ್ಬಳ್ಳಿ ಧಾರವಾಡ ಪೊಲಿಸ್ ಇಲಾಖೆಯಿಂದ ಇತ್ತೀಚೆಗೆ ಉತ್ತಮ ಕೆಲಸಗಳು ಆಗುತ್ತಿವೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದ್ದು, ನಾವೆಲ್ಲರೂ ಕೂಡಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ. ಮೊದಲು ನಾವು ಮಾನವರಾಗಬೇಕು. ನಂತರ ನಾವು ಹಿಂದೂ ಆಗಬೇಕು ಎಂದು ಅವರು ತಿಳಿಹೇಳಿದ್ದಾರೆ. ಶಾಂತಿಯುತ ಆಚರಣೆಗೆ ಶ್ರೀಗಳು ಕರೆ ನೀಡಿದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಕಮಿಷನರ್ ಹೇಳಿದ್ದೇನು?

ನೀವು ಕೇಳಿದಂತೆ ಗಣೇಶ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಆದರೆ ಷರತ್ತು ಉಲ್ಲಂಘಿಸುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಗೆ ಡಿಜೆ ಸ್ಥಗಿತಗೊಳ್ಳಬೇಕು. ಸಮಯ ಮೀರುವಂತಿಲ್ಲ. ಮಾರ್ಗಸೂಚಿ, ಷರತ್ತು ಪಾಲಿಸುವ ಮೂಲಕ ಹುಬ್ಬಳ್ಳಿ ಧಾರವಾಡವು ಈ ಭಾರಿ ಐತಿಹಾಸಿಕ ಗಣೇಶ ಉತ್ಸವಕ್ಕೆ ಮರಳಬೇಕು. ಡಿಜೆ ಬಂದ್ ಮಾಡಿದ ಬಳಿಕ ನೀವು ನಿಮ್ಮ ಮನೆಯವರೊಂದಿಗೆ ಉತ್ಸವ ಅಚರಿಸಿಕೊಳ್ಳಿ. ಗ್ಯಾಂಗ್ ಕಟ್ಟಿಕೊಂಡು ಓಡಾಡುವುದು, ಮಾರಕಾಸ್ತ್ರ ಇಟ್ಟುಕೊಂಡು ಓಡಾಡುವುದು ಬಿಡಬೇಕು. ಶಾಂತಿಯಿಂದ ಗಣೇಶೋತ್ಸವ ಆಚರಿಸುವ ಮೂಲಕ ಮಾದರಿಯಾಗಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

Leave a Reply

Your email address will not be published. Required fields are marked *