ಮಂಗಳೂರು: ಬೈಕ್ ಸ್ಕಿಡ್ ಆಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಯೆಯ್ಯಾಡಿ ಬಳಿ ಶುಕ್ರವಾರ ನಸುಕಿನಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇಲ್ಲಿನ ಶಕ್ತಿನಗರದ ಚಾಲುಕ್ಯ ಬಾರ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತರನ್ನು ರಾಮಕುಂಜದ ಚೇತನ್ (21) ಮತ್ತು ಮಂಗಳೂರು ನಗರದ ಉರ್ವ ಸ್ಟೋರ್‌ನ ಕಾಶಿ (17) ಎಂದು ಗುರುತಿಸಲಾಗಿದೆ. ಯುವಕರು ಮೂರು ಪ್ರತ್ಯೇಕ ದ್ವಿಚಕ್ರವಾಹನಗಳಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರು.
ಚೇತನ್ ಮತ್ತು ಕಾಶಿ ಪ್ರಯಾಣಿಸುತ್ತಿದ್ದ ಬೈಕ್ ಯೆಯ್ಯಾಡಿ ಬಳಿ ರಸ್ತೆಯಲ್ಲಿ ಸ್ಕಿಡ್ ಆಗಿದೆ. ಇವರಿಬ್ಬರಿದ್ದ ಬೈಕ್ ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.
ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.