ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೂಳೆರೋಗ ತಜ್ಞ ಡಾ. ವೆಂಕಟೇಶ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ.
ಬುರ್ಖಾಧರಿಸಿ ಬಂದಿದ್ದ ಇಬ್ಬರು ಮಹಿಳೆಯರು ಸೇರಿ ಕೆಲವರು ಡಾ. ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಡಾ. ವೆಂಕಟೇಶ್ ಕುತ್ತಿಗೆ ಪಟ್ಟಿ ಹಿಡಿದು, ಎಳೆದಾಡಿ ಮಹಿಳೆಯರು, ಬಳಿಕ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಇನ್ನು ವೈದ್ಯರ ಮೇಲಿನ ಹಲ್ಲೆಗೆ ವಿಧಾನ ಪರಿಷತ್ ಸದಸ್ಯ (MLC) ಸಿ.ಟಿ. ರವಿ (CT Ravi) ಖಂಡನೆ ವ್ಯಕ್ತಪಡಿಸಿದ್ದಾರೆ. ಗೃಹಸಚಿವ ಪರಮೇಶ್ವರ್ ಅವರೇ ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ಅಂತ ಟ್ವೀಟ್ ಮಾಡಿ ಸಿಟಿ ರವಿ ಆಗ್ರಹಿಸಿದ್ದಾರೆ.
ಜಿಲ್ಲಾಸ್ಪತ್ರೆ ವೈದ್ಯರ ಮೇಲೆ ಬುರ್ಖಾಧಾರಿ ಮಹಿಳೆಯರಿಂದ ಹಲ್ಲೆ
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲೆ ಇಬ್ಬರು ಬುರ್ಖಾಧಾರಿ ಮಹಿಳೆಯರು ಸೇರಿದಂತೆ ಕೆಲವರು ಹಲ್ಲೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆ ಮೂಳೆ ರೋಗ ತಕ್ಷ ಡಾ. ವೆಂಕಟೇಶ್ ಎಂಬುವರ ಮೇಲೆ ಮಹಿಳೆಯರು ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಕುತ್ತಿಗೆ ಪಟ್ಟಿ ಹಿಡಿದು, ಚಪ್ಪಲಿಯಿಂದ ಹಲ್ಲೆ
ಚಿಕ್ಕಮಗಳೂರಿನ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮೂಳೆರೋಗ ತಜ್ಞ ಡಾ. ವೆಂಕಟೇಶ್ ಅವರ ಕುತ್ತಿಗೆ ಪಟ್ಟಿ ಹಿಡಿದು, ಎಳೆದಾಡಿದ ಮಹಿಳೆಯರು, ಬಳಿಕ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಆ ಮಹಿಳೆಯರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದವರು ಯಾರು? ವೈದ್ಯರ ಮೇಲೆ ಹಲ್ಲೆ ನಡೆಸಿದ್ದು ಏಕೆ ಎಂಬ ವಿಚಾರ ಇನ್ನೂ ತಿಳಿದುಬಂದಿಲ್ಲ.
ಆಸ್ಪತ್ರೆಯಲ್ಲಿ ಪ್ರತಿಭಟನೆ, ರೋಗಿಗಳ ಪರದಾಟ
ಇನ್ನು ಮಹಿಳೆಯರು ವೈದ್ಯರ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಜಿಲ್ಲಾಸ್ಪತ್ರೆಯಲ್ಲಿ ದಿಢೀರ್ ಪ್ರತಿಭಟನೆ ನಡೆಯಿತು. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಲ್ಲಾ ರೀತಿಯ ಸೇವೆ ಸ್ಥಗಿತಗೊಳಿಸಿ, ದಿಢೀರ್ ಮುಷ್ಕರ ನಡೆಸಿದ್ರು. ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರೂ ಕೂಡ ಸೇರಿದ್ರು. ಇನ್ನು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ಬಂದಿದ್ದು ರೋಗಿಗಳು ಪರದಾಡುವಂತಾಯ್ತು.
ವೈದ್ಯರ ಮೇಲಿನ ಹಲ್ಲೆಗೆ ಸಿಟಿ ರವಿ ಖಂಡನೆ
ಇನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯರ ಮೇಲಿನ ಹಲ್ಲೆಯನ್ನು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ಡಾಕ್ಟರ್ ವೆಂಕಟೇಶ್ ಅವರ ಮೇಲೆ ಹಲ್ಲೆಯಾದ ಅಮಾನವೀಯ ಘಟನೆ ನಡೆದಿದೆ ಅಂತ ಹೇಳಿದ್ದಾರೆ.
ನೀಚ ಕೃತ್ಯ ಎಸಗಿದವರನ್ನು ಬಂಧಿಸಿ ಸನ್ಮಾನ್ಯ ಗೃಹ ಸಚಿವರಾದ ಡಾ. ಪರಮೇಶ್ವರ್ ಅವರು ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ ಅಂತ ಸಿಟಿ ರವಿ ಆಗ್ರಹಿಸಿದ್ದಾರೆ. ಡಿಜಿಪಿ ಅಲೋಕ್ ಮೋಹನ್ ಅವರೇ, ತಾವು ಈ ಕೂಡಲೇ ಆರೋಪಿಗಳನ್ನು ಬಂಧಿಸಿ, ವೈದ್ಯಕೀಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿ ಅಂತ ಟ್ವೀಟ್ ಮೂಲಕವೇ ಸಿಟಿ ರವಿ ಆಗ್ರಹಿಸಿದ್ದಾರೆ.