ಸಿಎಂ ರೇಸ್​ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಸಿಎಂ

ಬೆಳಗಾವಿ: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ದೀಪಾವಳಿ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರಿಗೆ ಸ್ಥಿರ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಅಸ್ಥಿರಗೊಳಿಸುವುದು, ಬೀಳಿಸುವುದು, ಒಡೆಯುವುದು, ಆಪರೇಷನ್ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದವರಿಗೆ ಇದೇ ಕೆಲಸವಾಗಿದೆ. ಸರ್ಕಾರ ಬೀಳಿಸುವುದು ಒಂದೇ ಅವರ ಕಾರ್ಯಕ್ರಮ ಎಂದು ಟೀಕಿಸಿದರು.

ನಾಳೆ ಸಿಎಂ ಭವಿಷ್ಯ ನಿರ್ಧಾರವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಗುಂಡೂರಾವ್, ನಾಳೆ ಏನೂ ಆಗುವುದಿಲ್ಲ. ಸಿಎಂ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿಎಂ ರೇಸ್​ನಲ್ಲಿ ಯಾರೂ ಇಲ್ಲ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅವರ ಸೋಷಿಯಲ್‌ ಮೀಡಿಯಾದಲ್ಲಿ ಏನೇನೂ ಹಾಕಿರುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ದೇಶದಲ್ಲೇ ನಂಬರ್ ಒನ್ ಅಲ್ವಾ? ಎಂದರು.

ಕೋರ್ಟ್​ನಲ್ಲಿ ಯಾವುದೇ ರೀತಿಯ ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ರಾಜ್ಯಪಾಲರು ತನಿಖೆಗೆ ಕೊಟ್ಟಿರುವುದು ಸರಿಯೋ ಅಥವಾ ತಪ್ಪೋ ಅಷ್ಟೇ ಇರುವುದು. ಅವರು ತಪ್ಪು ಮಾಡಿದ್ದಾರೆ ಎನ್ನುವುದು ಇಲ್ಲ. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅಧಿಕಾರದ ದುರುಪಯೋಗ ಮಾಡಿಲ್ಲ ಎಂದು ತಿಳಿಸಿದರು.

ರಾಜಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ ಮೇಲೆ ಇರುವ ಭ್ರಷ್ಟಚಾರದ ಕುರಿತ ಅರ್ಜಿ ರಾಜ್ಯಪಾಲರ ಕಚೇರಿಯಲ್ಲಿ ತಿಂಗಳುಗಟ್ಟಲೆ ಹಾಗೇ ಬಿದ್ದಿದೆ. ರಾಜ್ಯಪಾಲರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಸಿಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣವೇ ನೋಟಿಸ್ ಕೊಟ್ಟಿದ್ದಾರೆ. ಇದರಲ್ಲಿ ರಾಜ್ಯಪಾಲರ ಮನಸ್ಥಿತಿ ಮತ್ತು ಪಕ್ಷಪಾತ ಧೋರಣೆ ಗೊತ್ತಾಗುತ್ತದೆ ಎಂದು ಆರೋಪಿಸಿದರು. ಇಂದು ಖಾನಾಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸುತ್ತಿದ್ದೇನೆ. ಗೋಕಾಕ್‌ನಲ್ಲಿ ಆಸ್ಪತ್ರೆ ಕಾಮಗಾರಿ ಪರಿಶೀಲಿಸುತ್ತೇನೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆಯಿದೆ. ವೈದ್ಯರ ಕೊರತೆ ನಿವಾರಿಸಲು ಪ್ರಯತ್ನಿಸುತ್ತಿದ್ದೇನೆ. ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದ್ದೇವೆ. ನಿರೀಕ್ಷಿತ ಪ್ರಮಾಣದಲ್ಲಿ ತಜ್ಞ ವೈದ್ಯರು ಬರುತ್ತಿಲ್ಲ. ನಕಲಿ ವೈದರು ಎಲ್ಲ ಕಡೆ ಇದ್ದಾರೆ. ನಕಲಿ ವೈದ್ಯರ ವಿರುದ್ಧ ಕಾನೂನು ರೀತಿ ಮುಲಾಜಿಲ್ಲದೆ ಕ್ರಮ ಜರುಗಿಸಲು ಹೇಳಿದ್ದೇನೆ ಎಂದರು.

Leave a Reply

Your email address will not be published. Required fields are marked *