ಡೈಲಾಗ್ ಬರೆಯೋದರಲ್ಲಿ ಸೋತ ಕೊರಟಾಲ ಶಿವ..!
ಎನ್‌ಟಿಆರ್ ಅಭಿನಯದ ದೇವರ ಚಿತ್ರ ಇಂದು ತೆರೆಗೆ ಬಂದಿದೆ. ಕೊರಟಾಲ ಶಿವ ನಿರ್ದೇಶನದ ದೇವರ ಪಾರ್ಟ್ 1 ಸಿನಿಮಾದ ಕುರಿತು ಸಾಕಷ್ಟು ವಿಮರ್ಶೆಗಳು ಬರುತ್ತಿವೆ. ಗೂಗಲ್ ಆಡಿಯನ್ಸ್ ವಿಮರ್ಶೆ ವಿಭಾಗದಲ್ಲೂ ಸಾಕಷ್ಟು ಪ್ರೇಕ್ಷಕರು ಈ ಸಿನಿಮಾದ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಎನ್‌ಟಿ ರಾಮರಾವ್ ಜೂನಿಯರ್ ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಸೈಫ್ ಆಲಿ ಖಾನ್ ವಿಲನ್ ರೋಲ್‌ನಲ್ಲಿ ಮಿಂಚಿದ್ದಾರೆ. ಜಾಹ್ನವಿ ಕಪೂರ್ ನಾಯಕಿಯಾಗಿ ಇದೇ ಮೊದಲ ಬಾರಿಗೆ ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಶ್ರುತಿ ಮರಾಠೆ, ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಛಾಕೊ, ನರೈನ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ.
ದೇವರ ಸಿನಿಮಾ ವಿಮರ್ಶೆ: ಕೊನೆಯ 40 ನಿಮಿಷಗಳು ಸೂಪರ್
ಗೂಗಲ್ ವಿಮರ್ಶೆ ವಿಭಾಗದಲ್ಲಿ ದೇವರ ಸಿನಿಮಾದ ಕುರಿತು ಸಾಕಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಒಂದೇ ವಿಮರ್ಶೆಯನ್ನು ಹಲವು ಜನರ ಹೆಸರಲ್ಲಿ ಹಾಕಿದ್ದಾರೆ. ಅವರ ಪ್ರಕಾರ “ಮೊದಲಾರ್ಧದಲ್ಲಿ ಭಾವನಾತ್ಮಕ ಅಂಶಗಳು ಅಧಿಕವಾಗಿವೆ. ನಿರ್ದೇಶಕರು ಕಥೆ ಹೇಳುವ ರೀತಿ ಇಷ್ಟವಾಗಿಲ್ಲ. ಸಮುದ್ರದ ಸೀನ್‌ಗಳು ಉತ್ತಮ ಅನುಭವ ನೀಡುತ್ತದೆ. ದ್ವಿತೀಯಾರ್ಥ ತುಸು ಬೋರ್ ಅನಿಸಿತ್ತು. ಕೊನೆಯ 40 ನಿಮಿಷಗಳು ಸೂಪರ್, ಎರಡು ಬಾರಿ ನೋಡಬಹುದಾದ ಸಿನಿಮಾ” ಎಂದು ವಿಮರ್ಶೆ ಬರೆದು ಐದು ಸ್ಟಾರ್ ರೇಟಿಂಗ್ ನೀಡಿದ್ದಾರೆ.
ದ್ವಿತೀಯಾರ್ಧ ತುಸು ಟ್ರಿಮ್ ಮಾಡಬೇಕಿತ್ತು!
ಹರೀಶ್ ಎಂಬವರು ದೇವರ ಸಿನಿಮಾಕ್ಕೆ 4 ಸ್ಟಾರ್ ರೇಟಿಂಗ್ ನೀಡಿದ್ದಾರೆ. “ಇಡೀ ಚಿತ್ರವನ್ನು ಎನ್‌ಟಿಆರ್ ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಇವರ ಕ್ಯಾರೆಕ್ಟರ್ ನೋಡುವ ಸಲುವಾಗಿಯೇ ಈ ಚಿತ್ರ ನೋಡಬೇಕು. ಮೊದಲಾರ್ಧ ಅದ್ಭುತ, ದ್ವಿತೀಯಾರ್ಧ ಸರಾಸರಿಯಾಗಿದೆ. ಒಂದಿಷ್ಟು ಕತ್ತರಿ ಪ್ರಯೋಗ ಮಾಡಬೇಇತ್ತು. ಅಂತ್ಯ ಚೆನ್ನಾಇದೆ, ಆದರೆ, ಅಂತ್ಯ ಬಾಹುಬಲಿ ಅಥವಾ ಕಲ್ಕಿ ಲೆವೆಲ್‌ಗೆ ಇಲ್ಲ. ಸಿನಿಮಾಟೋಗ್ರಫಿ ಮತ್ತು ಮ್ಯೂಸಿಕ್ ಉತ್ತಮವಾಗಿದೆ. ಪಾರ್ಟ್ 2 ಬೇಗ ಬರುವ ನಿರೀಕ್ಷೆಯಲ್ಲಿರೋಣ” ಎಂದು ವಿಮರ್ಶೆ ಮಾಡಿದ್ದಾರೆ.
ಇಷ್ಟವಾಗುವ, ಇಷ್ಟವಾಗದ ವಿಷಯಗಳು
ಗೂಗಲ್ ರಿವ್ಯೂನಲ್ಲಿ ಇವತ್ರಿ ಪಣೀಂದ್ರ ಹೀಗೆ ವಿಮರ್ಶೆ ಮಾಡಿದ್ದಾರೆ. ಸಿನಿಮಾದ ಸ್ಟ್ರೆಂಥ್: ಮನಸ್ಸು ಸೆಳೆಯುವ ಮೊದಲಾರ್ಧ, ಜೂನಿಯರ್ ಎನ್‌ಟಿಆರ್ ನಟನೆ, ಆಕ್ಷನ್ ಕೊರಿಯೊಗ್ರಫಿ, ಅನಿರುದ್ಧ್ ಅವರ ಬ್ಯಾಕ್‌ಗ್ರೌಂಡ್ ಸ್ಕೋರ್. ಜಾಹ್ವನಿ ಕಪೂರ್ ಮೊದಲಾರ್ಧದಲ್ಲಿ ಇಷ್ಟವಾಗುತ್ತಾರೆ. ವೀಕ್‌ನೆಸ್: ಎನ್‌ಟಿಆರ್ ಪಾತ್ರವು ಭಾವನಾತ್ಮಕವಾಗಿ ಹತ್ತಿರವಾಗುವುದಿಲ್ಲ. ದ್ವಿತೀಯಾರ್ಧ ತುಸು ಬೋರ್ ಹೊಡೆಸುತ್ತದೆ. ಲವ್ ಎಪಿಸೋಡ್‌ನಲ್ಲಿ ಬರವಣಿಗೆ ಉತ್ತಮವಾಗಿಲ್ಲ. ಈ ಸಿನಿಮಾವನ್ನು ಇನ್ನಷ್ಟು ಬಿಗಿಯಾಗಿ ರಚಿಸಬೇಕಿತ್ತು ಎಂದು ವಿಮರ್ಶೆ ಮಾಡಿರುವ ಪಣೀಂದ್ರ ದೇವರ ಸಿನಿಮಾಕ್ಕೆ 3 ಸ್ಟಾರ್ ರೇಟಿಂಗ್ ನೀಡಿದ್ದಾರೆ.
ಅಂದಾಜಿಸಬಹುದಾದ ಕಥೆ
ದೇವರ ಪಾರ್ಟ್ 1 ಸಿನಿಮಾವು ಸಖತ್ ಆಕ್ಷನ್ ಹೊಂದಿದೆ. ಮನರಂಜನೆಯೂ ದೊರಕುತ್ತದೆ. ಜೂನಿಯರ್ ಎನ್‌ಟಿಆರ್ ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಜಾಹ್ನವಿ ಕಪೂರ್ ಈ ಸಿನಿಮಾಕ್ಕೆ ತನ್ನ ಚಾರ್ಮ್ ಸೇರಿಸಿದ್ದಾರೆ. ಸೈಫ್ ಪಾತ್ರವೂ ಇಷ್ಟವಾಗುತ್ತದೆ, ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಊಹಿಸಬಹುದಾದ ಸ್ಟೋರಿಲೈನ್ ಇದೆ. ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ಲ್ಯಾಗ್ ಉಂಟು ಮಾಡುತ್ತದೆ ಎಂದು ವಿಮರ್ಶಿಸಿರುವ ಸೀತಾರಾಮ ರಾವ್ ವಡ್ಡೆ ಅವರು 3.5 ಸ್ಟಾರ್ ರೇಟಿಂಗ್ ನೀಡಿದ್ದಾರೆ.
ದೇವರ ಸಿನಿಮಾ ಬೇಸರ ತರಿಸಿತು
ಗ್ಲೀನ್ ಲಾಸ್ಟರ್ ಎಂಬವರು ಒಂದು ಸ್ಟಾರ್ ರೇಟಿಂಗ್ ನೀಡಿ ಕಟುವಾಗಿ ವಿಮರ್ಶೆ ಮಾಡಿದ್ದಾರೆ. “ನನಗೆ ಈ ಸಿನಿಮಾ ತೀವ್ರ ನಿರಾಶೆ ಉಂಟುಮಾಡಿತು. ಎನ್‌ಟಿಆಆರ್ ಸರ್ ಅವರನ್ನು ಈ ಕೆಟ್ಟ ಸ್ಕ್ರಿಪ್ಟ್ಗೆ ಆಯ್ಕೆ ಮಾಡಬಾರದಿತ್ತು. ತನ್ನ ಊರನ್ನು ಕೆಟ್ಟವರಿಂದ ಕಾಪಾಡಲು ಪ್ರಯತ್ನಿಸುವ ವ್ಯಕ್ತಿಯ ಕಥೆಯಿದು. ಜಾಹ್ನವಿ ಕಪೂರ್‌ನಂತಹ ನಟಿಯ ಸಮರ್ಪಕ ಬಳಕೆಯಾಗಿಲ್ಲ. ಹಾಡು, ಸಂಗೀತವೂ ಇಷ್ಟವಾಗದು. ಕೊರಟಲ ಶಿವಗಾರು ಅವರೇ ದಯವಿಟ್ಟು ಎನ್‌ಟಿಆರ್‌ಗಾರು ಅವರ ಹೆಸರನ್ನು ಇಂತಹ ಚಿತ್ರಗಳ ಮೂಲಕ ಹಾಳು ಮಾಡಬೇಡಿ” ಎಂದು ವಿಮರ್ಶೆ ಮಾಡಿದ್ದಾರೆ.
ಕ್ಲೈಮ್ಯಾಕ್ಸ್ ನಿರೀಕ್ಷೆಯಂತೆ ಇಲ್ಲ
ಯಾದವ್ ನಲ್ಲನುಕುಲಾ ಎಂಬವರು ಹೀಗೆ ವಿಮರ್ಶೆ ಮಾಡಿದ್ದಾರೆ. “ಬ್ಲಾಕ್‌ಬಸ್ಟರ್ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಹೋದೆ. ನನಗೆ ಚಿತ್ರ ಬೇಸರ ಉಂಟು ಮಾಡಲಿಲ್ಲ. ಥಿಯೇಟರ್‌ನಲ್ಲಿ ಒಳ್ಳೆಯ ಅನುಭವ ನೀಡುತ್ತದೆ. ಆದರೆ, ಕ್ಲೈಮ್ಯಾಕ್ಸ್ ನಿರೀಕ್ಷಿಸಿದಂತೆ ಇಲ್ಲ” ಎಂದು ವಿಮರ್ಶೆ ಮಾಡಿದ್ದಾರೆ.