ನವದೆಹಲಿ: ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ. “ಬೆಂಗಳೂರಿನಲ್ಲಿ ಕಟ್ಟಡವೊಂದು ಕುಸಿದು ಸಂಭವಿಸಿದ ಜೀವಹಾನಿಯಿಂದ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಪಿಎಂಎನ್ಆರ್ಎಫ್ನಿಂದ ಮೃತರಿಗೆ ತಲಾ 2ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ‘‘ ಎಂದು ಅವರು ಹೇಳಿದ್ದಾರೆ.
ಬಾಬುಸಾಪಾಳ್ಯದಲ್ಲಿ ಕುಸಿದು ಬಿದ್ದ ನಿರ್ಮಾಣದ ಹಂತದ ಕಟ್ಟಡದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬಿಹಾರ ಮೂಲದ ಅರ್ಮಾನ್, ಮೊಹಮ್ಮದ್ ಸಾಹಿಲ್, ಸೋಲೋ ಪಾಸ್ವಾನ್, ಶ್ರೀರಾನ್ ಕಿರುಪಾಲ್. ತಮಿಳುನಾಡು ಮೂಲದ ಮಣಿಕಂಠನ್, ಸತ್ಯರಾಜು ಮತ್ತು ಆಂಧ್ರಪ್ರದೇಶ ಮೂಲದ ತುಳುಸಿರೆಡ್ಡಿ ಮತ್ತು ಉತ್ತರ ಪ್ರದೇಶ ಮೂಲದ ಪುಲ್ಚನ್ ಯಾದವ್ ಮೃತರು.
ಕಟ್ಟಡ ಕುಸಿತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಪೊಲೀಸರು ಮನೆ ಮಾಲೀಕನ ಪುತ್ರ ಭುವನ್ ಗೌಡ, ಕಟ್ಟಡದ ಮೇಲ್ವಿಚಾರಕರಾಗಿದ್ದ ಮೋಹನ್ ರೆಡ್ಡಿ, ಏಳುಮಲೈ ಎಂಬುವರನ್ನ ಬಂಧಿಸಿದ್ದಾರೆ. ಕಟ್ಟಡದ ನಾಲ್ಕನೇ ಅಂತಸ್ತಿನವರೆಗೂ ಉಸ್ತುವಾರಿ ವಹಿಸಿಕೊಂಡಿದ್ದ ಮುನಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.