ಬೆಂಗಳೂರು: ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ ಮಧ್ಯಂತರ ಜಾಮೀನು ಪಡೆದ ನಂತರ ನಟ ದರ್ಶನ್, ಬೆನ್ನುನೋವು, ಕಾಲು ನೋವಿನಿಂದಾಗಿ ಕೆಂಗೇರಿಯ BGS Global ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕಾರಿನಲ್ಲಿ ಆಸ್ಪತ್ರೆಗೆ ಬಂದ ದರ್ಶನ್ ಅವರಿಗೆ ನರರೋಗ ತಜ್ಞ ಡಾ. ನವೀನ್ ಅಪ್ಪಾಜಿಗೌಡ ನೇತೃತ್ವದ ತಂಡ ಆರೋಗ್ಯ ತಪಾಸಣೆ ನಡೆಸಿದ್ದು, ಇಸಿಜಿ, ರಕ್ತದೊತ್ತಡ, ಮಧುಮೇಹ ಮತ್ತಿತರ ತಪಾಸಣೆ ಮಾಡಲಾಗಿದೆ.
ದರ್ಶನ್ ಅವರಿಗೆ ಬೆನ್ನು, ಕಾಲು ನೋವಿದೆ. ಅವರ ಎಡಗಾಲಿನ ಸೆಳೆತವಿದೆ. ಎಂ.ಆರ್.ಐ, ಎಕ್ಸ್ ರೇ ಹಾಗೂ ರಕ್ತ ಪರೀಕ್ಷೆ ಮಾಡಬೇಕಾಗಿದೆ. ಎಲ್ಲಾ ಪರೀಕ್ಷೆ ವರದಿಗಳು ಬರಲು ಎರಡು ದಿನ ಬೇಕಾಗಿದೆ. ವರದಿ ಬಂದ ನಂತರ ಶಸ್ತ್ರ ಚಿಕಿತ್ಸೆ ಮಾಡಬೇಕೋ ಅಥವಾ ಫಿಸಿಯೋಥೆರಫಿ ಚಿಕಿತ್ಸೆಯಿಂದ ವಾಸಿ ಮಾಡಬಹುದೋ ಎಂಬುದನ್ನು ನಿರ್ಧರಿಸಲಾಗುವುದು. ಸದ್ಯ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಲಾಗಿದ್ದು, ನೋವು ನಿವಾರಕ ಔಷಧಗಳನ್ನು ನೀಡಲಾಗಿದೆ ಎಂದು ನವೀನ್ ಅಪ್ಪಾಜಿಗೌಡ ತಿಳಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ದರ್ಶನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನನ್ನು ಬುಧವಾರ ನೀಡಿತ್ತು