ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ವೃದ್ಧನ ಕೊಲೆ

ಡಿಜಿಟಲ್ ಅರೆಸ್ಟ್, ಬೆಂಗಳೂರು ವಿದ್ಯಾರ್ಥಿ ಆತ್ಮಹತ್ಯೆ

ಹರಿಯಾಣಮನೆಯ ಬಳಿ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ್ದಕ್ಕೆ ವೃದ್ಧನೊಬ್ಬನನ್ನು ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮೃತ ವ್ಯಕ್ತಿಯ ಪುತ್ರನ ದೂರಿನ ಮೇರೆಗೆ ಶುಕ್ರವಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜು, ಧೀರಜ್ ಮತ್ತು ನಂದು ಎಂಬ ಮೂವರು ಯುವಕರು ಗುರುವಾರ ಸಂಜೆ ದೀಪಾವಳಿ ಹಿನ್ನೆಲೆಯಲ್ಲಿ ಫರಿದಾಬಾದ್‌ನ ಸೆಕ್ಟರ್ 18ರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ತಮ್ಮ ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು. ಇದಕ್ಕೆ ತನ್ನ ತಂದೆ ಆಕ್ಷೇಪ ವ್ಯಕ್ತಪಡಿಸಿ ಪಕ್ಕದಲ್ಲಿ ಪಟಾಕಿ ಸಿಡುವಂತೆ ಹೇಳಿದಾಗ ಅವರು ಜಗಳಕ್ಕೆ ಬಂದಿದ್ದರು. ಮಾತಿಗೆ ಮಾತು ಬೆಳೆಯಿತು. ಬಳಿಕ ನಾನೇ ಮಧ್ಯ ಪ್ರವೇಶಿಸಿ ಎಲ್ಲರನ್ನು ಮನೆಗೆ ಕಳುಹಿಸಿ ಪರಿಸ್ಥಿತಿಯನ್ನು ಶಾಂತಿಗೊಳಿಸಿದೆ. ಆದರೆ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಹಿಂತಿರುಗಿ ಮತ್ತೆ ತಮ್ಮ ಮನೆ ಮುಂದೆ ಪಟಾಕಿ ಸಿಡಿಸಲು ಪ್ರಾರಂಭಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಮೂವರು ತನ್ನ ತಂದೆ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ಬಿಡಿಸಲು ಬಂದ ನಮ್ಮನ್ನೂ ಸಹ ಎಳೆದಾಡಿದರು. ಹಲ್ಲೆಯಿಂದ ನಮ್ಮ ತಂದೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಮೃತ ವ್ಯಕ್ತಿಯ ಪುತ್ರ ವಿನೋದ್ ದೂರು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿಗಳು ಕಾಣೆಯಾಗಿದ್ದು, ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಹರಿಯಾಣ ಜಿಲ್ಲೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಕುಟುಂಬವೊಂದರ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿರುವುದು ಕೂಡ ವರದಿಯಾಗಿದೆ. ಬಲ್ಲಭಗಢ ಪಟ್ಟಣದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಮನೆಯ ಬಾಗಿಲು ಮುರಿದು ಓರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕುಟುಂಬದವರು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *