ವರ್ಚುವಲ್ ವಿಚಾರಣೆಗೆ ಸಿಜೆಐ ಸಂಜೀವ್ ಖನ್ನಾ ಸೂಚನೆ

ವರ್ಚುವಲ್ ವಿಚಾರಣೆಗೆ ಸಿಜೆಐ ಸಂಜೀವ್ ಖನ್ನಾ ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಸಾಧ್ಯವಿರುವ ಎಲ್ಲ ಕಡೆ ವರ್ಚುವಲ್ ಕೋರ್ಟ್ ವಿಚಾರಣೆಗೆ ಅವಕಾಶ ನೀಡುವಂತೆ ಎಲ್ಲ ನ್ಯಾಯಾಧೀಶರಿಗೂ ಸೂಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮಂಗಳವಾರ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ಅಧ್ಯಕ್ಷ ಕಪಿಲ್ ಸಿಬಲ್ ಸೇರಿದಂತೆ ವಕೀಲರು ದೆಹಲಿ ಮತ್ತು ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಕುರಿತು ಪ್ರಸ್ತಾಪಿಸಿ ತಕ್ಷಣದ ಕ್ರಮಗಳನ್ನು ಸೂಚಿಸುವಂತೆ ಕೋರಿದರು.

ಈ ವೇಳೆ ‘ಸಾಧ್ಯವಿರುವ ಎಲ್ಲ ಕಡೆ ವರ್ಚುವಲ್ ವಿಚಾರಣೆಗೆ ಅನುಮತಿಸಲು ಸೂಚಿಸಿದ್ದೇವೆ’ ಎಂದು ಸಂಜೀವ್ ಖನ್ನಾ ತಿಳಿಸಿದರು.

‘ಮಾಲಿನ್ಯ ನಿಯಂತ್ರಣ ಮಿತಿ ಮೀರಿದೆ’ ಎಂದೂ ಕಪಿಲ್ ಸಿಬಲ್ ತಿಳಿಸಿದರು.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಮಂಗಳವಾರ ಬೆಳಿಗ್ಗೆ 8ಕ್ಕೆ 484 ಅಂಶದಷ್ಟಿತ್ತು. ಇದು ಈ ಋತುವಿನ ಅತ್ಯಂತ ಕೆಟ್ಟ ಮಟ್ಟದಲ್ಲಿದೆ. ಕೆಲವು ಪ್ರದೇಶಗಳಲ್ಲಿ 500 ಅಂಶಗಳ ಗಡಿಯನ್ನು ಮೀರಿದೆ.

ದೆಹಲಿಯ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿದ್ದರೂ ಜಿಆರ್ಎಪಿ-4ರ ಅಡಿಯಲ್ಲಿ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ಏಕಾಯಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

‘ಗುಣಮಟ್ಟ ನಿಯಂತ್ರಿಸಲು ಈಗ ಜಾರಿಗೊಳಿಸಿರುವ ಕಠಿಣ ಕ್ರಮಗಳನ್ನು ಸಡಿಲಗೊಳಿಸಲು ಅನುಮತಿಸುವುದಿಲ್ಲ. ಈ ಸಂಬಂಧ ನನ್ನ ಪೂರ್ವಾನುಮತಿ ಇಲ್ಲದೆ ಕ್ರಮ ತೆಗೆದುಕೊಳ್ಳಬಾರದು’ ಎಂದು ಕೋರ್ಟ್ ತಾಕೀತು ಮಾಡಿತ್ತು.

Leave a Reply

Your email address will not be published. Required fields are marked *