ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ ಎರಡು ದಿನ ಕಳೆದಿದೆ. ಸರ್ಕಾರ ರಚನೆಯ ಪ್ರಕ್ರಿಯೆಯೂ ಆರಂಭವಾಗಿದೆ. ಆದರೆ ಚುನಾವಣೆಯಲ್ಲಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಕುತೂಹಲ ಬಿಟ್ಟುಕೊಟ್ಟಿಲ್ಲ. ಬಿಜೆಪಿ ‘ಮಹಾಯತಿ’ ಮೈತ್ರಿಕೂಟದ ನೆರವಿನಿಂದ ಸರ್ಕಾರ ರಚಿಸಲಿದೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. ಮಹಾಯತಿ ಮೈತ್ರಿಕೂಟಕ್ಕೆ ಒಟ್ಟು 230 ಶಾಸಕರ ಬಲವಿದೆ.
2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ)57, ಎನ್ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳಲ್ಲಿ ಗೆದ್ದಿವೆ. ಮೂರು ಪಕ್ಷಗಳು ‘ಮಹಾಯುತಿ’ ಮೈತ್ರಿಕೂಟದಲ್ಲಿವೆ. ಹಾಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಇದೇ ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಲಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು?.
‘ಮಹಾಯತಿ’ ಮೈತ್ರಿಕೂಟ, ಬಿಜೆಪಿ ನಾಯಕರ ಮಾತಿನಂತೆ ಹೆಚ್ಚಿನ ಸ್ಥಾನಗಳಿಸಿದ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟ. ಚುನಾವಣೆಯಲ್ಲಿ 132 ಸೀಟುಗಳಲ್ಲಿ ಗೆದ್ದಿರುವ ಬಿಜೆಪಿಯೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕು. ನವೆಂಬರ್ 26ಕ್ಕೆ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಮೈತ್ರಿಕೂಟ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡಿಸಬೇಕಿದೆ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ: ಸದ್ಯದ ಮಾಹಿತಿಗಳ ಪ್ರಕಾರ ಆರ್ಎಸ್ಎಸ್ ಮತ್ತು ಬಿಜೆಪಿ ವರಿಷ್ಠರ ನೆಚ್ಚಿನ ನಾಯಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಹುದ್ದೆಯ ಹೆಸರಿಗೆ ಟ್ವಿಸ್ಟ್ ನೀಡಲಿದ್ದಾರೆಯೇ? ಎಂಬ ಚರ್ಚೆಗಳು ಸಹ ನಡೆದಿವೆ.
ಭಾನುವಾರ ಸಂಜೆ ಮುಂಬೈನಲ್ಲಿ ಮಹಾಯತಿ ಮೈತ್ರಿಪಕ್ಷಗಳಾದ ಎನ್ಸಿಪಿ ನಾಯಕ ಏಕನಾಥ್ ಶಿಂಧೆ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ಪ್ರತ್ಯೇಕವಾಗಿ ನೂತನ ಶಾಸಕರ ಸಭೆಯನ್ನು ನಡೆಸಿದರು. ಬಿಜೆಪಿ ಸಹ ಎಲ್ಲಾ ಶಾಸಕರು ಮುಂಬೈನಲ್ಲಿ ಇರಬೇಕು ಎಂದು ಸೂಚಿಸಿದೆ. ಯಾವಾಗ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತದೆ? ಎಂಬ ಮಾಹಿತಿ ಇಲ್ಲ. ಮೂಲಗಳ ಮಾಹಿತಿ ಪ್ರಕಾರ ದೇವೇಂದ್ರ ಫಡ್ನವೀಸ್ ಸೋಮವಾರ ದೆಹಲಿಗೆ ತೆರಳಲಿದ್ದಾರೆ. ವರಿಷ್ಠ ನಾಯಕರು ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆಯ ಬಳಿಕ ನೂತನ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಸೋಮವಾರ ಸಂಜೆ ಹೆಸರು ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಸದ್ಯಕ್ಕೆ ಇದೆ. ‘ಮಹಾಯತಿ’ ಒಂದು ಮುಖ್ಯಮಂತ್ರಿ 2 ಡಿಸಿಎಂ ಎಂಬ ತತ್ವಕ್ಕೆ ಈ ಬಾರಿಯೂ ಬದ್ಧವಾಗಿರಲಿದೆ ಎಂಬ ಚರ್ಚೆಗಳು ಸಾಗಿವೆ. ಮಹಾರಾಷ್ಟ್ರ ಸರ್ಕಾರದಲ್ಲಿ 43 ಸಚಿವ ಸ್ಥಾನ ಹೊಂದಲು ಅವಕಾಶವಿದೆ. ಬಿಜೆಪಿಯ 132, ಶಿವಸೇನೆ (ಏಕನಾಥ್ ಶಿಂಧೆ ಬಣ)57, ಎನ್ಸಿಪಿ (ಅಜಿತ್ ಪವಾರ್ ಬಣ) 41ರಲ್ಲಿ ಸಚಿವ ಸ್ಥಾನವನ್ನು ಹಂಚಿಕೆ ಮಾಡಬೇಕಿದೆ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರೆ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ. ಬೇರೆ ನಾಯಕನನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿ ದೇವೇಂದ್ರ ಫಡ್ನವೀಸ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿದೆ. 2014-2019ರ ತನಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ 2022ರಲ್ಲಿ ಮಹಾಯತಿ ಮೈತ್ರಿಕೂಟ ರಚನೆಯಾದಾಗ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿದ್ದರು. ಈ ಬಾರಿ ಬಿಜೆಪಿ ಸೀಟುಗಳ ಸಂಖ್ಯೆಯೇ ಹೆಚ್ಚಿದ್ದು ಫಡ್ನವೀಸ್ ಮುಖ್ಯಮಂತ್ರಿಯಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.